ಚಿಕ್ಕಮಗಳೂರು: ಶಾಸಕಿ ನಯನಾ ಮೋಟಮ್ಮ ವಿರುದ್ಧ ಗಾಂಧಿ ಪ್ರತಿಮೆ ಎದುರು ಮೌನ ಧರಣಿ

ಚಿಕ್ಕಮಗಳೂರು: ಮೂಡಿಗೆರೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕಿ ನಯನಾ ಮೋಟಮ್ಮ ವಿರುದ್ಧ ದಲಿತ ಸಂಘರ್ಷ ಸಮಿತಿ, ಪ್ರಗತಿಪರರು ಮತ್ತು ರೈತ ಸಂಘದ ಕಾರ್ಯಕರ್ತರು ಚಿಕ್ಕಮಗಳೂರು ನಗರದ ಕೋರ್ಟ್ ಆವರಣದ ಗಾಂಧಿ ಪ್ರತಿಮೆ ಎದುರು ಪ್ರಾಯಶ್ಚಿತ್ತ ಮೌನ ಧರಣಿ ನಡೆಸಿದರು.

ಶಾಸಕಿಯ ಗೆಲುವಿಗೆ ಶ್ರಮಿಸಿ ತಪ್ಪು ಮಾಡಿದ್ದೇವೆಂದು ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ಗಾಂಧಿ ಪ್ರತಿಮೆ ಬಳಿ ಕುಳಿತು ತಮ್ಮ ಪ್ರಾಯಶ್ಚಿತ್ತ ಭಾವ ವ್ಯಕ್ತಪಡಿಸಿದರು.

ನಯನಾ ಮೋಟಮ್ಮ, ಹಿಂದೂ ಮಹಾಸಭಾದ ಗಣಪತಿ ಲಾಂಛನ ಬಿಡುಗಡೆ ಸಮಾರಂಭದಲ್ಲಿ ಕೇಸರಿ ಶಾಲು ಧರಿಸಿ, 48ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಆರೋಪಿಯಾಗಿರುವ ಪ್ರಮೋದ್ ಮುತಾಲಿಕ್ ಜೊತೆ ವೇದಿಕೆ ಹಂಚಿಕೊಂಡಿದ್ದಾರೆ ಎಂದು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

“ಕೇಸರಿ ಶಾಲು ತೊಟ್ಟು, 3 ವರ್ಷ ಆದ ಮೇಲೆ ಬಿಜೆಪಿ ಹೋಗ್ತೀನೋ ಕಾಂಗ್ರೆಸ್ಸಲ್ಲೇ ಇರ್ತಿನೋ ಗೊತ್ತಿಲ್ಲ” ಎಂದು ನಯನಾ ಹೇಳಿದ್ದಾರೆ. ಅನ್ಯ ಧರ್ಮದ ಮೇಲೆ ದ್ವೇಷ ಕಾರುವ ಮುತಾಲಿಕ್ ಜೊತೆ ವೇದಿಕೆ ಹಂಚಿಕೊಂಡಿರುವುದು ಸಮಾಜದಲ್ಲಿ ಆಘಾತ ಮೂಡಿಸಿದೆ ಎಂದರು.

“ಇಂತವರ ಗೆಲುವಿಗೆ ಶ್ರಮಿಸಿದ್ದೇವೆ, ಮತ ಹಾಕಿ ತಪ್ಪು ಮಾಡಿದ್ದೇವೆ” ಎಂದು ನೊಂದ ಕಾರ್ಯಕರ್ತರು, ಗಾಂಧಿ ಪ್ರತಿಮೆ ಎದುರು ಮೌನವಾಗಿ ಕುಳಿತು ತಮ್ಮ ಪಶ್ಚಾತ್ತಾಪವನ್ನು ವ್ಯಕ್ತಪಡಿಸುತ್ತಿದ್ದೇವೆ. ಶಾಸಕಿಯ ಈ ನಡೆ ಕಾಂಗ್ರೆಸ್‌ನ ಮೌಲ್ಯಗಳಿಗೆ ವಿರುದ್ಧವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

“ಗಾಂಧೀಜಿಯ ತತ್ವಗಳನ್ನು ಎತ್ತಿಹಿಡಿಯುವ ಕಾಂಗ್ರೆಸ್ ಪಕ್ಷದ ಶಾಸಕಿಯಿಂದ ಇಂತಹ ನಡೆ ಅಪೇಕ್ಷಿತವಾಗಿರಲಿಲ್ಲ” ಎಂದು ದಲಿತ ಸಂಘರ್ಷ ಸಮಿತಿಯ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.