ಹಾಸನ: ಹುಡಾ ಅದ್ಯಕ್ಷ ಸ್ಥಾನವನ್ನು ಮುಸ್ಲಿಂ ಮುಖಂಡರಿಗೆ ಕೊಡಬೇಕು ಎಂದು ಇಂದು ನಡೆದ ಹೋರಾಟದಲ್ಲಿ ಪ್ರತಿಭಟನಾಕಾರರು ತಾಜಿಂ ಎಂಬವರನ್ನು ಬೆಂಬಲಿಸಿರುವುದಕ್ಕೆ ಕಾಂಗ್ರೆಸ್ ಪಕ್ಷದ ಮುಖಂಡರಿಂದಲೇ ಆಕ್ಷೇಪಣೆ ವ್ಯಕ್ತವಾಗಿದೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಹಾಸನ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಯ್ಯೂಂ, ಹುಡಾ ಅಧ್ಯಕ್ಷ ಸ್ಥಾನ ಮುಸ್ಲಿಂ ಮುಖಂಡರಿಗೆ ಕೊಡಬೇಕು ಎನ್ನುವುದು ನ್ಯಾಯಯುತ ಬೇಡಿಕೆಯಾಗಿದೆ.
ಆದರೆ ಪಕ್ಷದಲ್ಲಿ ದುಡಿದವರು, ಪಕ್ಷಕ್ಕೋಸ್ಕರ ಕೆಲಸ ಮಾಡಿದವರು. ಚುನಾವಣೆಗಳಲ್ಲಿ ಕಷ್ಟಪಟ್ಟು ಕೆಲಸ ಮಾಡಿದ ಬಹಳ ಮುಖಂಡರು ನಮ್ಮ ಪಕ್ಷದಲ್ಲಿ ಇದ್ದಾರೆ. ಅವರಲ್ಲಿ ಯಾರಾದರು ಒಬ್ಬರನ್ನ ಆಯ್ಕೆ ಮಾಡಿ ಅವರಿಗೆ ಅವಕಾಶ ಕೊಡಬಹುದು.
ಆದರೆ ಇಂದು ಪ್ರತಿಭಟನೆ ಮಾಡಿದ ಯಾರೂ ಒಂದೇ ಒಂದು ದಿನವೂ ಕಾಂಗ್ರೆಸ್ ಪಕ್ಷದ ಬಾವುಟ ಹಿಡಿದಿಲ್ಲ, ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪರ ಒಂದು ಮತವನ್ನೂ ಕೇಳಿಲ್ಲ, ಒಂದು ದಿನವೂ ಕಾಂಗ್ರೆಸ್ ಕಚೇರಿಗೇ ಬಂದಿಲ್ಲ ಎಂದು ಆರೋಪಿಸಿದ್ದಾರೆ.
ಹಾಗಿದ್ದರೆ ಇಂದು ಪ್ರತಿಭಟನೆ ಮಾಡಿದ ಇವರು ಯಾರು ಎನ್ನುವುದು ನಿಷ್ಠಾವಂತ ಕಾಂಗ್ರೆಸ್ ಕಾರ್ಯಕರ್ತರ ಪ್ರಶ್ನೆಯಾಗಿದೆ. ಪಕ್ಷದಲ್ಲಿ ಇವರ ಸ್ಥಾನ ಏನು? ಕಾಂಗ್ರೆಸ್ ಪಕ್ಷದಲ್ಲಿ ಇವರ ಅಸ್ತಿತ್ವ ಏನು? ಪಕ್ಷಕ್ಕೆ ಇವರ ಕೊಡುಗೆ ಏನು? ಇವರು ಎಷ್ಟು ವರ್ಷದಿಂದ ಕಾಂಗ್ರೆಸ್ನಲ್ಲಿದ್ದಾರೆ? ಎನ್ನುವುದು ಯಕ್ಷಪ್ರಶ್ನೆಯಾಗಿದೆ. ಹಾಗಾಗಿ ಪಕ್ಷದಲ್ಲಿ ದುಡಿದ ಹಿರಿಯರಿಗೆ ಅವಕಾಶ ಮಾಡಿಕೊಡಬೇಕಾಗಿ ಈ ಮೂಲಕ ಪಕ್ಷದ ವರಿಷ್ಠರಲ್ಲಿ ಮನವಿ ನ ಮನವಿ ಮಾಡುತ್ತೇವೆ ಎಂದಿದ್ದಾರೆ.










