ಹಾಸನ: ಜಿಲ್ಲೆಯಲ್ಲಿ ಇಂದು ಹೊಸ ವರ್ಷದ ಮೊದಲ ಮಳೆ ಸುರಿದಿದ್ದು, ಹಾಸನ, ಸಕಲೇಶಪುರ, ಆಲೂರು ಸೇರಿದಂತೆ ಜಿಲ್ಲೆಯ ವಿವಿಧ ಭಾಗಗಳಲ್ಲಿ ಮಳೆಯಾಗಿರುವ ವರದಿಯಾಗಿದೆ. ಅಕಾಲಿಕವಾಗಿ ಸುರಿದ ಮಳೆಯಿಂದಾಗಿ ಕಾಫಿ ಬೆಳೆಗಾರರು ಹಾಗೂ ರೈತರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ.
ಕಾಫಿ ಫಸಲು ಬಿಡಿಸಿ ಒಣಗಲು ಹಾಕಿದ್ದ ಬೆಳೆಗಾರರಿಗೆ ದಿಢೀರ್ ಮಳೆ ದೊಡ್ಡ ಹೊಡೆತ ನೀಡಿದೆ. ಮಳೆಯ ನೀರಿನಲ್ಲಿ ಕಾಫಿ ಬೀಜಗಳು ಕೊಚ್ಚಿ ಹೋಗದಂತೆ ರಕ್ಷಿಸಿಕೊಳ್ಳಲು ಬೆಳೆಗಾರರು ಮತ್ತು ಕಾರ್ಮಿಕರು ಸುರಿಯುವ ಮಳೆಯಲ್ಲಿಯೇ ಪರದಾಡಿದ ದೃಶ್ಯಗಳು ಕಂಡುಬಂದವು. ಹಲವೆಡೆ ಮನೆಯೊಳಗೆ ಕಾಫಿ ಫಸಲನ್ನು ಸ್ಥಳಾಂತರಿಸಿ ನೀರಿನಲ್ಲಿ ಕೊಚ್ಚಿ ಹೋಗದಂತೆ ತಡೆಯಲು ಕಾರ್ಮಿಕರು ಹರಸಾಹಸ ಪಟ್ಟರು.
ವಿಶೇಷವಾಗಿ ಬೇಲೂರು ತಾಲ್ಲೂಕಿನ ಅರೇಹಳ್ಳಿ ಹೋಬಳಿ ನೆಲ್ಕೆ ಗ್ರಾಮದಲ್ಲಿ ಮೊದಲ ಮಳೆಯ ಅವಾಂತರ ಗಂಭೀರವಾಗಿ ಕಂಡುಬಂದಿದ್ದು, ಕಾಫಿ ಬೆಳೆಗಾರರು ಕಂಗಾಲಾಗಿದ್ದಾರೆ.
ಇತ್ತ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದ್ದು, ವಾಹನ ಸವಾರರು ಹಾಗೂ ಬೀದಿ ಬದಿ ವ್ಯಾಪಾರಿಗಳು ತೀವ್ರ ತೊಂದರೆ ಅನುಭವಿಸಿದರು. ಅಕಾಲಿಕ ಮಳೆಯು ಕೃಷಿ ಚಟುವಟಿಕೆಗಳಿಗೆ ಅಡ್ಡಿ ತಂದಿದ್ದು, ಮುಂದಿನ ದಿನಗಳಲ್ಲಿ ಬೆಳೆ ನಷ್ಟದ ಆತಂಕ ರೈತರಲ್ಲಿ ಮನೆಮಾಡಿದೆ.
ವರ್ಷದ ಮೊದಲ ಮಳೆಯೇ ಈ ರೀತಿ ಸಂಕಷ್ಟ ತಂದಿರುವುದು ಕಾಫಿ ಬೆಳೆಗಾರರು ಮತ್ತು ರೈತರಲ್ಲಿ ಚಿಂತೆಗೆ ಕಾರಣವಾಗಿದೆ.









