ಜ.16ರಂದು ಸಕಲೇಶಪುರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಜನಸ್ಪಂದನಾ ಕಾರ್ಯಕ್ರಮ

MLA Cement Manju said that a public outreach program has been organized on Friday, January 16, under the supervision of District In-charge Minister Krishnabaire Gowda, at the premises adjacent to the town's Mini Vidhansauda.

ಸಕಲೇಶಪುರ: ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣೇಬೈರೇಗೌಡರವರ ಉಸ್ತುವಾರಿಯಲ್ಲಿ ಜನವರಿ 16 ಶುಕ್ರವಾರದಂದು ಪಟ್ಟಣದ ಮಿನಿವಿಧಾನಸೌದದ ಪಕ್ಕದಲ್ಲಿರುವ ಆವರಣದಲ್ಲಿ ಜನಸ್ಪಂದನಾ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು.

ಪಟ್ಟಣದ ಮಿನಿ ವಿಧಾನಸೌಧದಲ್ಲಿ ಅಧಿಕಾರಿಗಳ ಸಭೆ ನಡೆಸಿದ ನಂತರ ಕಾರ್ಯಕ್ರಮ ನಡೆಯುವ ಸ್ಥಳವನ್ನು ಪರಿಶೀಲಿಸಿದ ನಂತರ ಮಾತನಾಡಿ, ಸಕಲೇಶಪುರ ವಿಧಾನಸಭಾ ಕ್ಷೇತ್ರದಲ್ಲಿ ಕಂದಾಯ ಇಲಾಖೆ ವ್ಯಾಪ್ತಿಯ ಸಮಸ್ಯೆಗಳು ಹೆಚ್ಚಿದ್ದು ಹೀಗಾಗಿ ಮಾನ್ಯ ಕಂದಾಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಖುದ್ದು ಸ್ಥಳಕ್ಕೆ ಬಂದು ಸಮಸ್ಯೆಗಳನ್ನು ಆಲಿಸಬೇಕೆಂದು ಮನವಿ ಮಾಡಿದ್ದೆ, ಈ ನಿಟ್ಟಿನಲ್ಲಿ ಮಾನ್ಯ ಕಂದಾಯ ಸಚಿವರ ಅಧ್ಯಕ್ಷತೆಯಲ್ಲಿ ಜನಸ್ಪಂದನಾ ಕಾರ್ಯಕ್ರಮ ನಡೆಯಲಿದ್ದು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ತಮ್ಮ ಸಮಸ್ಯೆಗಳಿಗೆ ಪರಿಹಾರ ಹುಡುಕಿಕೊಳ್ಳಬೇಕು.

ಕಾಡಾನೆ ದಾಳಿಯಿಂದ ಇಂದು ಮಹಿಳೆಯೊಬ್ಬರು ಮೃತಪಟ್ಟಿದ್ದು ಈ ಕುರಿತು ಅರಣ್ಯ ಸಚಿವ ಈಶ್ವರ್ ಖಂಡ್ರೆರವರೊಡನೆ ದೂರವಾಣಿ ಮುಖಾಂತರ ಮಾತನಾಡಿದೆ ಆದರೆ ಅವರ ತಂದೆಯವರು ಅನಾರೋಗ್ಯ ಪೀಡಿತರಾಗಿರುವುದರಿಂದ ಹೆಚ್ಚಿಗೆ ಮಾತನಾಡಲು ಸಾಧ್ಯವಾಗಿಲ್ಲ. ಹೀಗಾಗಿ ಕಂದಾಯ ಸಚಿವರ ಬಳಿ ಮಾತನಾಡಿದ್ದು ಕಾರ್ಯಕ್ರಮಕ್ಕೂ ಮುನ್ನ ಕಂದಾಯ ಸಚಿವರೊಡನೆ ಕಾಡಾನೆ ಹೋರಾಟಗಾರರು, ಬೆಳೆಗಾರರ ಸಂಘಟನೆಗಳ ಮುಖಂಡರ ಜೊತೆ ಕೆಲಕಾಲ ಕಾಡಾನೆ ಸಮಸ್ಯೆ ಪರಿಹಾರದ ಮಾರ್ಗೋಪಾಯಗಳ ಕುರಿತು ಸಭೆ ನಡೆಸಲಾಗುವುದು ಎಂದರು.

ಈ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿಗಳು ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು, ಸಕಲೇಶಪುರ, ಆಲೂರು, ಕಟ್ಟಾಯ ತಹಶೀಲ್ದಾರ್ ಗಳು ಹಾಗೂ ಎಲ್ಲಾ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿರುವರು ಎಂದರು.

ಜಿಲ್ಲಾಧಿಕಾರಿ ಲತಾಕುಮಾರಿ ಮಾತನಾಡಿ, ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡರು ಇದೇ ಮಿನಿವಿಧಾನಸೌಧದ ಪಕ್ಕದ ವೇದಿಕೆಯಲ್ಲಿ ನಡೆಯಲಿರುವ ಜನಸ್ಪಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಈ ಕಾರ್ಯಕ್ರಮದಲ್ಲಿ ಶಾಸಕರು, ಜಿಲ್ಲಾಮಟ್ಟದ ಅಧಿಕಾರಿಗಳು ಭಾಗವಹಿಸಲಿದ್ದು ಸಾರ್ವಜನಿಕರು ಈ ಕಾರ್ಯಕ್ರಮದ ಸದುಪಯೋಗ ಮಾಡಿಕೊಳ್ಳಬೇಕಾಗಿದೆ. ಬೆಳಿಗ್ಗೆ 9 ಗಂಟೆಗೆ ಕಾರ್ಯಕ್ರಮ ಆರಂಭವಾಗಲಿದ್ದು ಅರ್ಜಿದಾರರು ಮೊದಲಿಗೆ ನೋಂದಣಿ ಮಾಡಿಕೊಳ್ಳಬೇಕು, ನಂತರ ಒಬ್ಬೊಬ್ಬರನ್ನೇ ವೇದಿಕೆಗೆ ಬಂದು ಅಹುವಾಲು ದಾಖಲಿಸಲು ಅವಕಾಶ ನೀಡಲಾಗುತ್ತದೆ.

ಚನ್ನರಾಯಪಟ್ಟಣದಲ್ಲಿ ಜನಸ್ಪಂದನಾ ಕಾರ್ಯಕ್ರಮ ನಡೆದಾಗ 1200ಕ್ಕೂ ಹೆಚ್ಚು ಅರ್ಜಿಗಳು ಸ್ವೀಕಾರವಾಗಿದ್ದು ಇಲ್ಲೂ ಸಹ ಹೆಚ್ಚು ಅರ್ಜಿಗಳು ಬರುವ ನಿರೀಕ್ಷೆಯಿದೆ. ಕಾಡಾನೆ ಸಮಸ್ಯೆ ಪರಿಹಾರಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಹಲವು ಯೋಜನೆ ಮಾಡುತ್ತಿದ್ದಾರೆ. ಆನೆಧಾಮ ನಿರ್ಮಾಣಕ್ಕೆ ಸ್ಥಳ ಹುಡುಕುವ ಪ್ರಯತ್ನ ನಡೆಯುತ್ತಿದೆ ಎಂದರು.

ಈ ಸಂಧರ್ಭದಲ್ಲಿ ಉಪವಿಭಾಗಾಧಿಕಾರಿ ಮಂಜುನಾಥ್, ತಹಶೀಲ್ದಾರ್ ಸುಪ್ರೀತಾ, ಡಿ.ವೈ.ಎಸ್.ಪಿ ಮಾಲತೀಶ್, ವಲಯ ಅರಣ್ಯಾಧಿಕಾರಿ ಹೇಮಂತ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

MLA Cement Manju said that a public outreach program has been organized on Friday, January 16, under the supervision of District In-charge Minister Krishnabaire Gowda, at the premises adjacent to the town’s Mini Vidhansauda.