ಹೊಳೆನರಸೀಪುರ: ಪಟ್ಟಣದ ಕೋಟೆ ಮುಖ್ಯ ರಸ್ತೆಯಲ್ಲಿರುವ ಪುರಸಭೆ ವಾಣಿಜ್ಯ ಸಂರ್ಕೀಣದ ವರ್ಣಿಕ ಬಟ್ಟೆ ಅಂಗಡಿಯಲ್ಲಿ ವಿದ್ಯುತ್ ಶಾರ್ಟ್ ಸಕ್ಯೂಟ್‌ನಿಂದ ಸಂಭವಿಸಿದ ಬೆಂಕಿ ಅವಘಡದಲ್ಲಿ ದೀಪಾವಳಿ ಹಬ್ಬದ ವ್ಯಾಪಾರಕ್ಕೆಂದು ತಂದಿದ್ದ ಬಟ್ಟೆಗಳು ಸುಟ್ಟು ಕರಕಲಾಗಿವೆ.
ಪಟ್ಟಣದ ವಕೀಲ ಗೋವಿಂದರಾಜು ಪತ್ನಿ ನಯನ ಅವರ ವರ್ಣಿಕ ಅಂಗಡಿಯಲ್ಲಿ ಶನಿವಾರ ರಾತ್ರಿ 11.45ರ ಸುಮಾರಿನಲ್ಲಿ ಬೆಂಕಿ ಅವಘಡ ಸಂಭವಿಸಿ, ಭಾರಿ ಪ್ರಮಾಣದ ಮಹಿಳೆಯರ ಸೀರೆಗಳು ಹಾಗೂ ಸಿದ್ಧ ಉಡುಪುಗಳು ಸುಟ್ಟು ಕರಕಲಾಗಿವೆ.
ಅಗ್ನಿಶಾಮಕ ಠಾಣೆ ಅಧಿಕಾರಿ ಸತ್ಯನಾರಾಯಣ ನೇತೃತ್ವದಲ್ಲಿ ಸಿಬ್ಬಂದಿ ಲಕ್ಷ್ಮೀಪತಿ, ರವಿ ಹುರಲಿಕುಪ್ಪಿ, ಆನಂದ ಜೋಗಿ ಹಾಗೂ ಬಸವರಾಜ ಪಾಟೀಲ ಅವರು ಸಕಾಲದಲ್ಲಿ ಕಾರ್ಯಾಚರಣೆ ನಡೆಸಿ, ಹೆಚ್ಚಿನ ಅನಾಹುತ ನಡೆಯದಂತೆ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.










