ಚಿಕ್ಕಮಗಳೂರು: ಅಸ್ಸಾಂ ‘ಜೈಲ್ ಬ್ರೇಕ್’ ಅಪರಾಧಿಗಳು ಕಾಫಿನಾಡಿನಲ್ಲಿ!

ಚಿಕ್ಕಮಗಳೂರು: ಅಸ್ಸಾಂ ಮೂಲದ ಕಾರ್ಮಿಕರ ವೇಷದಲ್ಲಿ ಅಪರಾಧ ಹಿನ್ನೆಲೆಯ ಕ್ರಿಮಿನಲ್ ಗಳು ಮಲೆನಾಡಿನಲ್ಲಿ ಬೀಡುಬಿಡುತ್ತಿದ್ದಾರೆ ಎಂಬ ಆರೋಪಕ್ಕೆ ಪುಷ್ಟಿ ನೀಡುವ ಪ್ರಕರಣವೊಂದನ್ನು ಪೊಲೀಸರು ಬೆಳಕಿಗೆ ತಂದಿದ್ದಾರೆ.

ಪೋಕ್ಸೋ ಪ್ರಕರಣದಲ್ಲಿ 20 ವರ್ಷಗಳ ಕಾಲ ಸಜಾಬಂಧಿಗಳಾಗಿದ್ದ ಇಬ್ಬರು ಜೈಲಿನಿಂದ ಪರಾರಿಯಾಗಿದ್ದ ಅಸ್ಸಾಂ ಮೂಲದ ಅಪರಾಧಿಗಳನ್ನು ಪತ್ತೆ ಹಚ್ಚಿದ ಚಿಕ್ಕಮಗಳೂರು ಪೊಲೀಸರು ಅವರನ್ನು ಅಸ್ಸಾಂ ಪೊಲೀಸರಿಗೆ ಒಪ್ಪಿಸಿದ್ದಾರೆ

ಅಸ್ಸಾಂ ರಾಜ್ಯದ ಮೊರಿಗಾವ್ ಜಿಲ್ಲಾ ಕಾರಾಗೃಹದಲ್ಲಿ 20 ವರ್ಷಗಳ ಕಾಲ ಸಜಾಬಂಧಿಗಳಾಗಿದ್ದ ಇಬ್ಬರು ಅಪರಾಧಿಗಳು ಕಾರಾಗೃಹದಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದ ಪ್ರಕರಣದಲ್ಲಿ, ಚಿಕ್ಕಮಗಳೂರು ಜಿಲ್ಲೆಯ ಪೊಲೀಸರು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

ಪೋಕ್ಸೋ ಪ್ರಕರಣದಲ್ಲಿ ಸಜಾಬಂಧಿಗಳಾಗಿದ್ದ ಎಂ.ಡಿ. ಜಿಯಾರುಲ್ ಇಸ್ಲಾಂ ಬಿನ್ ಜಲಾಲುದ್ದೀನ್ (24 ವರ್ಷ, ವಾಸ: ಕಲ್ ಕುಚ್ಚಿ, ಜಾಂಗಲ್ ಬಸ್ತಿ, ಮಿಸ್ಸಾಮರಿ ಜಿಲ್ಲೆ, ಅಸ್ಸಾಂ) ಹಾಗೂ ಸುಬಾರತ ಸರ್ಕಾರ್ ಬಿನ್ ನಂದಲಾಲ್ ಸರ್ಕಾರ್ (33 ವರ್ಷ, ವಾಸ: ಕಾನಬೋರಿ ಗ್ರಾಮ, ಜಾಗಿರೋಡ್, ಮೊರಿಗಾವ್ ಜಿಲ್ಲೆ, ಅಸ್ಸಾಂ) ಎಂಬ ಇಬ್ಬರು ಕಾರಾಗೃಹದಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದರು.

ಇದರಿಂದಾಗಿ ಅಸ್ಸಾಂ ರಾಜ್ಯದ ಮೊರಿಗಾವ್ ಪೊಲೀಸ್ ಠಾಣೆಯಲ್ಲಿ ದಿನಾಂಕ 20-08-2025 ರಂದು ಮೊ.ನಂ 212/2025, ಕಲಂ: 61(2), 262, 49 ಬಿಎನ್ಎಸ್ ಅಡಿ ಪ್ರಕರಣ ದಾಖಲಾಗಿತ್ತು.

ಆರೋಪಿಗಳನ್ನು ಪತ್ತೆಹಚ್ಚಲು ಡಾ. ವಿಕ್ರಂ ಅಮಟೆ, ಐಪಿಎಸ್, ಪೊಲೀಸ್ ಅಧೀಕ್ಷಕರು, ಚಿಕ್ಕಮಗಳೂರು ಜಿಲ್ಲೆ ಇವರ ಮಾರ್ಗದರ್ಶನದಲ್ಲಿ, ಗ್ರಾಮಾಂತರ ಠಾಣೆಯ ಪೊಲೀಸ್ ನಿರೀಕ್ಷಕ ಸಚಿನ್ ನೇತೃತ್ವದಲ್ಲಿ ಪಿಎಸ್ಐ ರಘುನಾಥ ಎಸ್.ವಿ., ಹಾಗೂ ಸಿಬ್ಬಂದಿಗಳಾದ ಹಾಲಪ್ಪ ಎಂ.ಎಸ್ (ಎಚ್‌ಸಿ–41), ವಿನಾಯಕ (ಎಚ್‌ಸಿ–68), ಕಿರಣ (ಪಿಸಿ–96) ರನ್ನೊಳಗೊಂಡ ವಿಶೇಷ ತಂಡವನ್ನು ರಚಿಸಲಾಗಿತ್ತು.

ಸದರಿ ತಂಡವು ವಿವಿಧ ಮೂಲಗಳಿಂದ ಮಾಹಿತಿ ಸಂಗ್ರಹಿಸಿ, ಖಚಿತ ಸುಳಿವಿನ ಮೇರೆಗೆ 26-08-2025 ರಂದು ಆರೋಪಿಗಳನ್ನು ಪತ್ತೆಹಚ್ಚಿ ವಶಕ್ಕೆ ಪಡೆದು, ಮುಂದಿನ ಕಾನೂನು ಕ್ರಮಕ್ಕಾಗಿ ಅವರನ್ನು ಅಸ್ಸಾಂ ಪೊಲೀಸರ ವಶಕ್ಕೆ ಹಸ್ತಾಂತರ ಮಾಡಿದೆ.

ಈ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡು ಉತ್ತಮ ಕರ್ತವ್ಯ ನಿರ್ವಹಿಸಿದ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳನ್ನು ಪೋಲೀಸ್ ಅಧೀಕ್ಷಕರು ಶ್ಲಾಘಿಸಿದ್ದಾರೆ.