ಹಾಸನ: ಸಾಲಗಾಮೆ ಹೋಬಳಿ ಬೊಮ್ಮೇನಹಳ್ಳಿ ಗ್ರಾಮದಲ್ಲಿ ಇಂದು 30 ಲಕ್ಷ ವೆಚ್ಚದ ಸಮುದಾಯ ಭವನ, ₹25 ಲಕ್ಷ ವೆಚ್ಚದ ಅಂಗನವಾಡಿ ಕಟ್ಟಡವನ್ನು ಶಾಸಕ ಸ್ವರೂಪ್ ಪ್ರಕಾಶ್ ಉದ್ಘಾಟಿಸಿದರು.
ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಹಾಗೂ ಗ್ರಾಮದ ಮುಖಂಡರ ಸಮ್ಮುಖದಲ್ಲಿ ಕಟ್ಟಡ ಉದ್ಘಾಟನೆ ನಡೆಸಿದ ಶಾಸಕರನ್ನು ಗ್ರಾಮದ ಮಹಿಳೆಯರು ಆರತಿ ಎತ್ತಿ ಸ್ವಾಗತಿಸಿದರೆ, ಮುಖಂಡರು ಅವರನ್ನು ಅದ್ದೂರಿಯಾಗಿ ಬರಮಾಡಿಕೊಂಡು ಸನ್ಮಾನಿಸಿ ಗೌರವಿಸಿದರು.
ಬಳಿಕ ಮಾತನಾಡಿದ ಶಾಸಕ ಸ್ವರೂಪ್ ಪ್ರಕಾಶ್, ಗ್ರಾಮದ ಜನರಿಗೆ ಶುಭ ಸಮಾರಂಭಗಳಿಗೆ ಸಮುದಾಯ ಭವನ ಬೇಕು ಎಂಬ ಬಹುದಿನಗಳ ಬೇಡಿಕೆ ಈಡೇರಿದೆ. ಗ್ರಾಮಸ್ಥರು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿದ ಅವರು, ಗ್ರಾಮದ ಮಕ್ಕಳಿಗೆ ಅಂಗನವಾಡಿ ಅವಶ್ಯಕತೆ ಮನಗಂಡು ಕಟ್ಟಡವನ್ನು ನಿರ್ಮಿಸಿ ಇಂದು ಉದ್ಘಾಟನೆ ಮಾಡಲಾಗಿದೆ ಮಕ್ಕಳಿಗೆ ಅಂಗನವಾಡಿ ಮೂಲಕವೇ ಗುಣಮಟ್ಟದ ಶಿಕ್ಷಣ ಆರಂಭಿಸುವಂತೆ ಮನವಿ ಮಾಡಿದರು.
ಬಳಿಕ ತೋಟಗಾರಿಕಾ ಇಲಾಖೆ ವತಿಯಿಂದ ತೆಂಗು ಅಭಿವೃದ್ಧಿ ಮಂಡಳಿಯ ಸಹಯೋಗದೊಂದಿಗೆ ತೆಂಗು ಪ್ರ್ಯಾತ್ಯಕ್ಷಿತೆ ಮತ್ತು ತಾಕುಗಳ ನಿರ್ವಹಣೆ ಕಾರ್ಯಕ್ರಮದ ಫಲಾನುಭವಿಗಳಿಗೆ ಪರಿಕರ ವಿತರಣೆ ಹಾಗೂ ಪ್ರಚಾರ ಮತ್ತು ಸಾಹಿತ್ಯ ಯೋಜನೆಯಡಿ ತೆಂಗು ಬೆಳೆ ನಿರ್ವಹಣೆಯ ಕುರಿತು ವಿಚಾರ ಸಂಕೀರ್ಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಪರಿಕರಗಳನ್ನು ವಿತರಿಸಿ ಸದುಪಯೋಗ ಪಡೆದುಕೊಳ್ಳುವಂತೆ ಕರೆ ನೀಡಲಾಯಿತು.










