ಚಿಕ್ಕಮಗಳೂರು: ಮಗಳನ್ನೇ ಹಣಕ್ಕಾಗಿ ವೇಶ್ಯಾವಾಟಿಕೆಗೆ ನೂಕಿದ ಅಮಾನವೀಯ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಬೀರೂರು ಠಾಣೆ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ. ತಾಯಿ ಇಲ್ಲದ 16 ವರ್ಷದ ಅಪ್ರಾಪ್ತ ಬಾಲಕಿಯನ್ನು ಆಕೆಯ ತಂದೆ ಹಾಗೂ ಅಜ್ಜಿ ಸೇರಿ ಹಣಕ್ಕಾಗಿ ವೇಶ್ಯಾವಾಟಿಕೆಗೆ ಬಳಸಿರುವುದು ತನಿಖೆಯಲ್ಲಿ ಬಯಲಾಗಿದೆ.
ಆರೋಪಿ ಗಿರೀಶ್ ಎಂಬ ತಂದೆ, ಭರತ್ ಶೆಟ್ಟಿ ಎಂಬುವನ ಸಹಾಯದಿಂದ ಮಗಳನ್ನು ಮಂಗಳೂರಿಗೆ ಕರೆದೊಯ್ದು, ಆರು ದಿನಗಳ ಕಾಲ 10ಕ್ಕೂ ಹೆಚ್ಚು ಜನರಿಂದ ಅತ್ಯಾಚಾರಕ್ಕೆ ಒಳಪಡಿಸಿದ್ದಾನೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಋತುಚಕ್ರದ ಸಮಯದಲ್ಲೂ ಬಾಲಕಿಯ ಮೇಲೆ ದೌರ್ಜನ್ಯ ನಡೆದಿರುವ ಅಮಾನವೀಯ ಕೃತ್ಯ ಜನರನ್ನು ಆತಂಕಿತರಾಗಿಸಿದೆ.
ಮಂಗಳೂರಿನಲ್ಲಿ ನಡೆದ ಅಮಾನುಷ ಕೃತ್ಯದ ಬಳಿಕ ಊರಿಗೆ ವಾಪಸ್ಸಾದ ಬಾಲಕಿ ತನ್ನ ನೋವನ್ನು ಚಿಕ್ಕಪ್ಪನಿಗೆ ತಿಳಿಸಿದ್ದಾಳೆ. ಬಳಿಕ ಬಾಲಕಿಯ ಚಿಕ್ಕಪ್ಪ ಹಾಗೂ ಅತ್ತೆ ಬೀರೂರು ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ.
ದೂರು ಆಧರಿಸಿ ಪ್ರಕರಣ ದಾಖಲಿಸಿಕೊಂಡ ಬೀರೂರು ಪೊಲೀಸರು ತಕ್ಷಣ ಕಾರ್ಯಾಚರಣೆ ನಡೆಸಿ, ಅಪ್ರಾಪ್ತ ಬಾಲಕಿಯ ತಂದೆ ಗಿರೀಶ್, ಅಜ್ಜಿ ನಾಗರತ್ನ ಹಾಗೂ ಭರತ್ ಶೆಟ್ಟಿ ಸೇರಿದಂತೆ ಪ್ರಮುಖ ಆರೋಪಿಗಳನ್ನು ಬಂಧಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ ಹೆಚ್ಚಿನ ತನಿಖೆ ಮುಂದುವರೆದಿದೆ.
ಈ ಅಮಾನುಷ ಕೃತ್ಯ ಜಿಲ್ಲೆಯಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದ್ದು, ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.










