ಚಿಕ್ಕಮಗಳೂರು : ಹಿಂದೂ ಮಹಿಳೆಯೊಂದಿಗೆ ಇದ್ದ ಸಂದರ್ಭದಲ್ಲಿ ಯೂತ್ ಕಾಂಗ್ರೆಸ್ ಮಾಜಿ ಜಿಲ್ಲಾಧ್ಯಕ್ಷನಿಗೆ ಸಾರ್ವಜನಿಕವಾಗಿ ಥಳಿತವಾದ ಘಟನೆ ಚಿಕ್ಕಮಗಳೂರು ನಗರದಲ್ಲಿ ನಡೆದಿದೆ. ಚಿಕ್ಕಮಗಳೂರು ಜಿಲ್ಲಾ ಯೂತ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಯಲ್ ಷರೀಫ್ ಅವರಿಗೆ ಸ್ಥಳೀಯರು ಹಲ್ಲೆ ನಡೆಸಿದ ಪ್ರಕರಣ ಬೆಳಕಿಗೆ ಬಂದಿದೆ.
ಗಂಡನಿಂದ ಬೇರೆಯಾಗಿದ್ದ ಮಹಿಳೆಯೊಂದಿಗೇ ರಾಯಲ್ ಷರೀಫ್ ಇದ್ದಾಗ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾರೆ ಎನ್ನಲಾಗಿದೆ. ಚಿಕ್ಕಮಗಳೂರು ನಗರದ ಶಂಕರಪುರ ಬಡಾವಣೆಯ ಬೆಲ್ಟ್ ರೋಡ್ ಬಳಿ ಈ ಘಟನೆ ನಡೆದಿದ್ದು, ರಾಯಲ್ ಷರೀಫ್ ಆಗಾಗ್ಗೆ ಆ ಮಹಿಳೆಯ ಮನೆಗೆ ಹೋಗಿ ಬರುತ್ತಿದ್ದರೆಂದು ಸ್ಥಳೀಯರು ಆರೋಪಿಸಿದ್ದಾರೆ.
ರಾಯಲ್ ಷರೀಫ್ ಮನೆಗೆ ಬರುತ್ತಿದ್ದುದನ್ನು ಶಂಕರಪುರದ ಕೆಲ ಯುವಕರು ಗಮನಿಸುತ್ತಿದ್ದು, ಕಳೆದ ರಾತ್ರಿ ಮಹಿಳೆಯೊಂದಿಗೆ ಇದ್ದ ಸಂದರ್ಭದಲ್ಲೇ ಗಂಡ ಹಾಗೂ ಯುವಕರು ಅವರನ್ನು ಸೀಜ್ ಮಾಡಿದ್ದಾರೆ. ಈ ವೇಳೆ ಮನೆಗೆ ಬಂದ ಮಹಿಳೆಯ ಗಂಡನಿಗೆ ರಾಯಲ್ ಷರೀಫ್ ಥಳಿಸಿ ಕಳಿಸಿದ್ದರೆಂದು ಆರೋಪಿಸಲಾಗಿದೆ.
ಹಲ್ಲೆಗೊಳಗಾದ ಮಹಿಳೆಯ ಗಂಡ ಈ ವಿಷಯವನ್ನು ಶಂಕರಪುರದ ಹುಡುಗರಿಗೆ ತಿಳಿಸಿದ್ದು, ಬಳಿಕ ಎಲ್ಲರೂ ಸೇರಿ ಮನೆಗೆ ತೆರಳಿದ್ದಾರೆ. ಅಲ್ಲಿ ಮಾತಿಗೆ ಮಾತು ಬೆಳೆದು ಗಲಾಟೆ ನಡೆದಿದ್ದು, ಕೊನೆಗೆ ರಾಯಲ್ ಷರೀಫ್ ಮೇಲೆ ಹಲ್ಲೆ ನಡೆದಿದೆ ಎನ್ನಲಾಗಿದೆ.
ಘಟನೆ ಕುರಿತು ಪ್ರತಿಕ್ರಿಯಿಸಿದ ರಾಯಲ್ ಷರೀಫ್, “ನಾನು ನನ್ನ ಸ್ನೇಹಿತನ ಮನೆಗೆ ಬಂದಿದ್ದೆ ಅಷ್ಟೇ” ಎಂದು ಹೇಳಿಕೊಂಡಿದ್ದಾರೆ. ಈ ಸಂಬಂಧ ಚಿಕ್ಕಮಗಳೂರು ನಗರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.










