ಹಾಸನ : ಮಾಡಾಳು ಗ್ರಾಮದ ಸ್ವರ್ಣ ಗೌರಮ್ಮ ದೇವಿ ಸನ್ನಿಧಿ ಭಕ್ತರ ಇಷ್ಟಾರ್ಥ ಈಡೇರಿಸುವ ಸುಕ್ಷೇತ್ರ: ಕೋಡಿ ಮಠ ಶ್ರೀ

2026ರ ಶ್ರಾವಣ ಪಂಚಮಿಗೆ ನೂತನ ದೇವಾಲಯ ಲೋಕಾರ್ಪಣೆ: ಕೋಡಿಮಠದ ಜಗದ್ಗುರು ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ

ಹಾಸನ : ಫೆಬ್ರವರಿ 5, 2026: ಮಾಡಾಳು ಗ್ರಾಮದ ಇತಿಹಾಸ ಪ್ರಸಿದ್ಧ ಪುಣ್ಯಕ್ಷೇತ್ರ ಮೂಲಸ್ಥಾನ ಸ್ವರ್ಣ ಗೌರಮ್ಮ ದೇವಿ ಸನ್ನಿಧಿಯು ಭಕ್ತರ ಅಷ್ಟೋತ್ತರಗಳನ್ನು ಈಡೇರಿಸುವ ಶಕ್ತಿಶಾಲಿ ಸುಕ್ಷೇತ್ರವಾಗಿದೆ ಎಂದು ಹಾರನಹಳ್ಳಿ ಕೋಡಿಮಠದ ಜಗದ್ಗುರು ಡಾ. ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಬುಧವಾರ ಹೇಳಿದರು.

ಕೋಡಿಮಠ ಮಹಾ ಸಂಸ್ಥಾನದ ವತಿಯಿಂದ ಮಾಡಾಳು ಗ್ರಾಮದಲ್ಲಿ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಶ್ರೀ ಸ್ವರ್ಣ ಗೌರಮ್ಮ ದೇವಿ ದೇವಾಲಯದ ಕಾಮಗಾರಿಯನ್ನು ಶ್ರೀಗಳು ಖುದ್ದಾಗಿ ವೀಕ್ಷಿಸಿ, ಬಳಿಕ ಅಲ್ಲಿ ಸೇರಿದ್ದ ಭಕ್ತರನ್ನು ಉದ್ದೇಶಿಸಿ ಆಶೀರ್ವಚನ ನೀಡಿದರು.

ಈ ವರ್ಷವೇ 2026ರ ಶ್ರಾವಣ ಪಂಚಮಿ ದಿನ ನೂತನ ದೇವಾಲಯದ ಲೋಕಾರ್ಪಣೆ ನಡೆಯಲಿದ್ದು, ಆ ವೇಳೆಗೆ ಮುಂಚಿತವಾಗಿಯೇ ದೇವಾಲಯದ ಕಾಮಗಾರಿಯನ್ನು ಸಂಪೂರ್ಣವಾಗಿ ಮುಗಿಸಬೇಕೆಂದು ಕಾಮಗಾರಿ ಗುತ್ತಿಗೆದಾರ ಮುರುಡೇಶ್ವರದ ವಿನಾಯಕ್ ಅವರಿಗೆ ಶ್ರೀಗಳು ಸೂಚನೆ ನೀಡಿದರು. ದೇವಾಲಯದ ನಿರ್ಮಾಣಕ್ಕೆ ಶ್ರೀ ಮಠದ ವತಿಯಿಂದ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು ಎಂದೂ ಅವರು ಭರವಸೆ ನೀಡಿದರು.

ಶ್ರೀ ಸ್ವರ್ಣ ಗೌರಮ್ಮ ದೇವಿಗೆ ಕೋಡಿಮಠದ ಮಹಾ ತಪಸ್ವಿ ಶಿವಲಿಂಗ ಸ್ವಾಮೀಜಿಯವರು ಕೋಟಿ ಜಪ ಮಾಡಿ ಸಿದ್ಧಪಡಿಸಿದ ಮೂಗುತಿಯನ್ನು ಆಶೀರ್ವದಿಸಿ ನೀಡಿದ್ದು, ಆ ಪವಿತ್ರ ಮೂಗುತಿಯ ದರ್ಶನದಿಂದ ಭಕ್ತರ ಸಕಲ ಇಷ್ಟಾರ್ಥಗಳು ಈಡೇರುತ್ತಿವೆ. ಇದರಿಂದಲೇ ಈ ಕ್ಷೇತ್ರ ಇತಿಹಾಸ ಪ್ರಸಿದ್ಧಿ ಪಡೆದಿದೆ ಎಂದು ಶ್ರೀಗಳು ವಿವರಿಸಿದರು.

ಈ ಸಂದರ್ಭದಲ್ಲಿ ಗೌರಮ್ಮ ದೇವಿ ಸೇವಾ ಸಮಿತಿ ಅಧ್ಯಕ್ಷ ಎಂ.ಎಸ್. ನಟರಾಜ್, ಗೌರವಾಧ್ಯಕ್ಷ ಎಸ್. ಮಲ್ಲಿಕಾರ್ಜುನಪ್ಪ, ಮುಖಂಡರಾದ ಎಂ.ಸಿ. ನಟರಾಜ್, ಮಾಡಾಳು ಶಿವಲಿಂಗಪ್ಪ, ದುಮ್ಮೇನಹಳ್ಳಿ ಶಂಕ್ರಪ್ಪ, ಎಂಬಿ ಅಶೋಕ್, ಹೊಸಳ್ಳಿ ಶಿವಣ್ಣ, ಎಂ.ಟಿ. ಲೋಕೇಶ್, ಎಂ.ಡಿ. ಸೋಮಶೇಖರ್, ಚಂದ್ರಪ್ಪ, ದಾಸಪ್ಪ, ಕಟ್ನಿ ತಿಮ್ಮಯ್ಯ ಸೇರಿದಂತೆ ಸೇವಾ ಸಮಿತಿ ಸದಸ್ಯರು ಮತ್ತು ಭಕ್ತರು ಉಪಸ್ಥಿತರಿದ್ದರು.