ಚಿಕ್ಕಮಗಳೂರು : ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನಲ್ಲಿ ನಡೆದ ಹೃದಯಸ್ಪರ್ಶಿ ಘಟನೆ ಎಲ್ಲರ ಮನಸೂರೆಗೊಂಡಿದೆ. ಆಟೋ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡ ಮಂಜುನಾಥ್ (35) ಅವರು ಮೆದುಳು ನಿಷ್ಕ್ರಿಯಗೊಂಡು ಮೃತಪಟ್ಟರೂ, ಅವರ ಪತ್ನಿ ಅಪೂರ್ವ ಶೆಟ್ಟಿ ಅವರು ಪತಿಯ ಸಾವಿನ ನೋವಿನಲ್ಲಿಯೇ ಅಪಾರ ಮಾನವೀಯತೆ ತೋರಿದ್ದಾರೆ.
ಪತಿ ಮತ್ತೊಬ್ಬರಲ್ಲಿ ಜೀವಂತವಾಗಿರಲಿ ಎಂಬ ಉದ್ದೇಶದಿಂದ ಅವರು ಅಂಗಾಂಗ ದಾನಕ್ಕೆ ಒಪ್ಪಿಗೆ ನೀಡಿ ಸಮಾಜಕ್ಕೆ ಮಹತ್ವದ ಸಂದೇಶ ನೀಡಿದ್ದಾರೆ.
ಮಂಜುನಾಥ್ ಅವರು ಆಟೋ ಅಪಘಾತಕ್ಕೊಳಗಾದ ವೇಳೆ ತಲೆಗೆ ಗಂಭೀರ ಪೆಟ್ಟು ಬಿದ್ದಿದ್ದು, ಪರಿಣಾಮವಾಗಿ ಮೆದುಳು ನಿಷ್ಕ್ರಿಯಗೊಂಡಿತ್ತು. ಮೊದಲಿಗೆ ಕೊಪ್ಪದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು, ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ವೈದ್ಯಕೀಯ ಪ್ರಯತ್ನಗಳೆಲ್ಲವೂ ಫಲಕಾರಿಯಾಗದೆ ಮಂಜುನಾಥ್ ಅವರು ಸಾವನ್ನಪ್ಪಿದ್ದಾರೆ.
ಸರ್ಕಾರದ ಮೂಲಕ ಅಂಗಾಂಗ ದಾನಕ್ಕೆ ಅವಕಾಶವಿದೆ ಎಂದು ತಿಳಿದ ಬಳಿಕ ಪತ್ನಿ ಅಪೂರ್ವ ಶೆಟ್ಟಿ ಅವರು ಧೈರ್ಯದಿಂದ ಪತಿಯ ಹೃದಯ, ಕಿಡ್ನಿ, ಲಿವರ್ ಸೇರಿ ಪ್ರಮುಖ ಅಂಗಾಂಗಗಳನ್ನು ದಾನ ಮಾಡಲು ನಿರ್ಧರಿಸಿದರು. ಕೊಪ್ಪ ತಾಲೂಕಿನ ಪ್ರಶುಮನಿ ಆಸ್ಪತ್ರೆಯಲ್ಲಿ ಅಂಗಾಂಗ ದಾನ ಪ್ರಕ್ರಿಯೆ ಯಶಸ್ವಿಯಾಗಿ ನಡೆಯಿತು.
ಮಣಿಪಾಲ್ ಆಸ್ಪತ್ರೆಯವರು ಅಂಗಾಂಗ ದಾನ ಮಾಡಿದರೆ ಚಿಕಿತ್ಸಾ ಶುಲ್ಕವನ್ನು ಮನ್ನಾ ಮಾಡುವುದಾಗಿ ತಿಳಿಸಿದ್ದರೂ, ಅದಕ್ಕೆ ಮನಸ್ಸು ಒಪ್ಪದ ಅಪೂರ್ವ ಶೆಟ್ಟಿ ಅವರು ಹಣ ಪಾವತಿಸಿ ಪತಿಯ ಮೃತದೇಹವನ್ನು ಮನೆಗೆ ಕರೆತಂದಿದ್ದರು.
ನಾಲ್ಕು ವರ್ಷ ಮತ್ತು ಒಂದು ವರ್ಷದ ಇಬ್ಬರು ಗಂಡು ಮಕ್ಕಳಿರುವ ಈ ಕುಟುಂಬ ಆರ್ಥಿಕವಾಗಿ ಬಡವಾಗಿದ್ದು, ಮುಂದಿನ ದಿನಗಳಲ್ಲಿ ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಚಿಂತೆ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಕುಟುಂಬವು ಸಂಘ–ಸಂಸ್ಥೆಗಳು ಹಾಗೂ ದಾನಿಗಳ ನೆರವನ್ನು ಬಯಸಿದೆ. ಪತಿಯ ಸಾವಿನಲ್ಲೂ ಸಾರ್ಥಕತೆ ಕಂಡ ಅಪೂರ್ವ ಶೆಟ್ಟಿ ಅವರ ಈ ನಿರ್ಧಾರ ಮಾನವೀಯತೆಯ ಅತ್ಯುತ್ತಮ ಉದಾಹರಣೆಯಾಗಿ ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ.










