ಚನ್ನರಾಯಪಟ್ಟಣ: ಬುತ್ತಿ ಸೋಮೇಶ್ವರ ದೇವಾಲಯ ಲೋಕಾರ್ಪಣೆ ನೆರವೇರಿಸಿದ ನೊಣವಿನಕೆರೆ ಶ್ರೀಗಳು

ಚನ್ನರಾಯಪಟ್ಟಣ : ತಾಲ್ಲೂಕಿನ ಹೊಸಹಳ್ಳಿ ಪುರ ಗ್ರಾಮದಲ್ಲಿ ಜೀರ್ಣೋದ್ಧಾರಗೊಂಡಿರುವ ಶ್ರೀ ಬುತ್ತಿ ಸೋಮೇಶ್ವರ ದೇವಾಲಯ ಲೋಕಾರ್ಪಣ ಕಾರ್ಯವನ್ನು ನೊಣವಿನಕೆರೆ ಶ್ರೀ ಕರಿವೃಷಭ ದೇಶಿಕೇಂದ್ರ ಶಿವಯೋಗೀಶ್ವರ ಮಹಾ ಸ್ವಾಮೀಜಿ ಅವರು ಭಾನುವಾರ ನೆರವೇರಿಸಿದರು.

ಹಿನ್ನೆಲೆಯಲ್ಲಿ ಕಳೆದ ಮೂರು ದಿನಗಳಿಂದ ದೇಗುಲದಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿದವು. ಹಸಿರು ಚಪ್ಪರ ಹಾಕಿ ತಳಿರು-ತೋರಣಗಳಿಂದ ಸಿಂಗರಿಸಿದ್ದು ದೇಗುಲ, ರಸ್ತೆ ಹಾಗೂ ಬೀದಿಗಳನ್ನು ವಿದ್ಯುತ್ ದೀಪಾಲಂಕಾರಗೊಳಿಸಲಾಗಿತ್ತು.

ಭಾನುವಾರ ಮುಂಜಾನೆ ಗ್ರಾಮಕ್ಕೆ ಆಗಮಿಸಿದ ನೊಣವಿನಕೆರೆ ಶ್ರೀ ಕಾಡುಸಿದ್ದೇಶ್ವರ ಮಠದ ಶ್ರೀ ಕರಿವೃಷಭ ದೇಶಿಕೇಂದ್ರ ಶಿವಯೋಗಿಸ್ವರ ಸ್ವಾಮೀಜಿಯವರನ್ನು ಪಾದಪೂಜೆ ಮಾಡಿ ಪೂರ್ಣಕುಂಭದೊಂದಿಗೆ ಸ್ವಾಗತಿಸಲಾಯಿತು.

ಶ್ರೀಗಳ ದಿವ್ಯ ಸಾನಿಧ್ಯದಲ್ಲಿ ಶ್ರೀ ಬುತ್ತಿ ಸೋಮೇಶ್ವರ ಸ್ವಾಮಿಗೆ ವಿವಿಧ ಬಗೆಯ ಅಭಿಷೇಕಗಳು ನೆರವೇರಿದ್ದು ವಸ್ತ್ರ ಹಾಗೂ ಆಭರಣಗಳಿಂದ ಸಿಂಗರಿಸಲಾಯಿತು. ಶ್ರೀಗಳು ಕಳಶ ಪ್ರತಿಷ್ಠಾಪನ ಕಾರ್ಯವನ್ನು ನೆರವೇರಿಸಿ ಭಕ್ತರಿಗೆ ಆಶೀರ್ವಚನ ನೀಡಿದರು. ಭಕ್ತರು ಶ್ರೀಗಳು ಹಾಗೂ ಸ್ವಾಮಿಯ ದರ್ಶನ ಪಡೆದು ಪುನೀತರಾದರು.

ಹೋಮ, ಹವನ ಹಾಗೂ ಪೂರ್ಣಾವತಿ ನಂತರ ಮಹಾ ಮಂಗಳಾರತಿ ನಡೆಯಿತು. ಬಳಿಕ ಅನ್ನದಾಸೋಹ ನೆರವೇರಿತು. ನರಿಹಳ್ಳಿ, ಉಳ್ಳಾವಳ್ಳಿ, ಹೊಸಹಳ್ಳಿ, ತುಪ್ಪದಹಳ್ಳಿ, ನಾಗನಹಳ್ಳಿ, ಬಿಳಿಕೆರೆ ಸೇರಿದಂತೆ ಸುತ್ತಮುತ್ತಲ ಗ್ರಾಮಸ್ಥರು ದೇಗುಲದ ಲೋಕಾರ್ಪಣ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.