ಚನ್ನರಾಯಪಟ್ಟಣ: ತಾಲ್ಲೂಕಿನ ಹೆಗ್ಗಡಿಹಳ್ಳಿ ಗ್ರಾಮದ ಬಳಿ ಸರ್ವಿಸ್ ರಸ್ತೆಗೆ ಅಡ್ಡಲಾಗಿ ನಿರ್ಮಿಸಿರುವ ಉಬ್ಬುಗಳನ್ನು ಕಿಡಿಗೇಡಿಗಳು ಧ್ವಂಸ ಮಾಡಿರುವುದು ಅನಾಹುತಕ್ಕೆ ಆಹ್ವಾನ ನೀಡುತ್ತಿದೆ.
ನೆಲಮಂಗಲದಿಂದ ಹಾಸನ ವರೆಗೆ ರಾಷ್ಟ್ರೀಯ ಹೆದ್ದಾರಿ 75 ರ ಬದಿಯಲ್ಲಿ ಸಿಗುವ ಗ್ರಾಮಗಳ ಬಳಿ ಅನಾಹುತಗಳನ್ನು ತಡೆಗಟ್ಟಲು ಮತ್ತು ಅಪಘಾತಗಳನ್ನು ನಿಯಂತ್ರಿಸುವ ಸಲುವಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಸರ್ವಿಸ್ ರಸ್ತೆ ನಿರ್ಮಿಸಿದೆ.
ಇದರಿಂದ ಗ್ರಾಮೀಣ ಪ್ರದೇಶದ ಜನತೆ ಸರ್ವಿಸ್ ರಸ್ತೆಯಲ್ಲಿ ಸುಗಮ ಸಂಚಾರ ಮಾಡುತ್ತಿರುವುದರಿಂದ ಅನಾಹುತಗಳನ್ನು ನಿಯಂತ್ರಿಸಲು ಅನುಕೂಲವಾಗುತ್ತಿದೆ.
ಆದರೆ ಇತ್ತೀಚಿನ ದಿನಗಳಲ್ಲಿ ಸರ್ವಿಸ್ ರಸ್ತೆಯಲ್ಲಿಯೂ ಹೆಚ್ಚು ವಾಹನಗಳು ಸಂಚರಿಸುತ್ತಿದ್ದು ಅತಿ ವೇಗದಲ್ಲಿ ಚಾಲನೆ ಮಾಡುವ ಪರಿಣಾಮ ಅಪಘಾತಗಳ ಸಂಖ್ಯೆಯೂ ಸಹ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ.
ಇದರಿಂದ ಅಪಘಾತಗಳನ್ನು ನಿಯಂತ್ರಿಸುವ ಸಲುವಾಗಿ ಸರ್ವಿಸ್ ರಸ್ತೆ ವ್ಯಾಪ್ತಿಯ ಅಪಘಾತ ವಲಯಗಳನ್ನು ಗುರುತಿಸಿ ಅಡ್ಡಲಾಗಿ ಉಬ್ಬುಗಳನ್ನು ನಿರ್ಮಿಸಲಾಗುತ್ತಿದೆ.
ಆದರೆ ಉಬ್ಬುಗಳನ್ನು ನಿರ್ಮಿಸಿದ ನಂತರ ವೇಗವಾಗಿ ವಾಹನಗಳನ್ನು ಚಲಾಯಿಸಲು ಸಾಧ್ಯವಾಗದ ಕಾರಣ ಕಿಡಿಗೇಡಿಗಳಿಂದ ರಾತ್ರಿ ಸಮಯದಲ್ಲಿ ಅವುಗಳನ್ನು ಮನಬಂದಂತೆ ಜಖಂಗೊಳಿಸಿ ಧ್ವಂಸ ಮಾಡುವ ಪ್ರಕ್ರಿಯೆ ನಡೆಯುತ್ತಿದೆ.
ಉಬ್ಬುಗಳನ್ನು ಜಖಂಗೊಳಿಸಿರುವ ಕಾರಣ ವಾಹನಗಳು ಎಂದಿನಂತೆಯೇ ಅತಿ ವೇಗದಲ್ಲಿಯೇ ಸಂಚರಿಸುತ್ತಿರುವ ದೃಶ್ಯಗಳು ಕಂಡುಬರುತ್ತಿದೆ. ಇದರಿಂದ ಅಪಘಾತಗಳು ಮತ್ತೆ ಸಂಭವಿಸುವ ಸಾಧ್ಯತೆ ಇದ್ದು ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ ಕ್ರಮ ಕೈಗೊಳ್ಳಬೇಕು ಎಂಬುದು ಸ್ಥಳೀಯರ ಮನವಿಯಾಗಿದೆ.










