ಚನ್ನರಾಯಪಟ್ಟಣ: ಕಡೆ ಕಾರ್ತಿಕದ ಪ್ರಯುಕ್ತ ತಾಲೂಕಿನಾದ್ಯಂತ ವಿವಿಧ ದೇಗುಲಗಳಲ್ಲಿ ಸೋಮವಾರ ವಿಶೇಷ ಪೂಜೆ, ಹೋಮ-ಹವನ ಹಾಗೂ ಅನ್ನದಾಸೋಹ ನಡೆಯಿತು.
ಮುಂಜಾನೆಯಿಂದಲೇ ದೇಗುಲಗಳಿಗೆ ಹಸಿರು ಚಪ್ಪರ ಹಾಕಲಾಗಿದ್ದು ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು. ದೇವತೆಗಳಿಗೆ ವಿವಿಧ ಅಭಿಷೇಕ, ಕುಂಕುಮಾರ್ಚನೆ, ಪುಷ್ಪಾರ್ಚನೆ ಹಾಗೂ ವಿಶೇಷ ಪೂಜಾ ವಿಧಿ ವಿಧಾನಗಳು ನೆರವೇರಿದವು.
ಕಡೆ ಕಾರ್ತಿಕ ಸೋಮವಾರದ ಪ್ರಯುಕ್ತ ಭಕ್ತರು ಸಾಸಲು ಶ್ರೀ ಶಂಭುಲಿಂಗೇಶ್ವರ, ಬೆಳಗಿಹಳ್ಳಿ ಶ್ರೀ ಕಂಬದ ನರಸಿಂಹಸ್ವಾಮಿ, ನುಗ್ಗೇಹಳ್ಳಿ ಶ್ರೀ ಚನ್ನಕೇಶವ, ನಾಗರ ನವಿಲ ಶ್ರೀ ನಾಗೇಶ್ವರ ಸ್ವಾಮಿ ಹಾಗೂ ಶ್ರೀಕ್ಷೇತ್ರ ಕಬ್ಬಳಿ ಶ್ರೀ ಬಸವೇಶ್ವರ ಸ್ವಾಮಿ ಸನ್ನಿಧಿ ಸೇರಿದಂತೆ ಪಂಚಲಿಂಗಗಳಿಗೆ ತೆರಳಿ ದರ್ಶನ ಪಡೆದು ಪುನೀತರಾದರು.

ಶ್ರೀಕ್ಷೇತ್ರ ಕಬ್ಬಳಿ ಶ್ರೀ ಬಸವೇಶ್ವರ ಸ್ವಾಮಿ ಸನ್ನಿಧಿಯಲ್ಲಿ ಕಳೆದ ವಾರವೇ ಜಾತ್ರಾ ಮಹೋತ್ಸವ ಮುಗಿದಿದ್ದರೂ ಕ್ಷೇತ್ರಕ್ಕೆ ಆಗಮಿಸುವ ಭಕ್ತರ ಸಂಖ್ಯೆ ಕಡಿಮೆಯಾಗಿಲ್ಲ. ಶ್ರೀ ಶಿವಪುತ್ರನಾಥ ಸ್ವಾಮೀಜಿಯವರ ನೇತೃತ್ವದಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿದವು. ಪುಷ್ಕರಣಿಯಲ್ಲಿ ಗಂಗಾ ಪೂಜೆ, ದೇಗುಲದ ಮುಂದೆ ವಾಹನಗಳ ಪೂಜೆ ಹಾಗೂ ಜಾನುವಾರುಗಳನ್ನು ಕರೆತಂದು ದೇಗುಲದ ಸುತ್ತ ಪ್ರದಕ್ಷಿಣೆ ಹಾಕಿಸಿ ತೀರ್ಥ ಪ್ರೋಕ್ಷಣೆ ಮಾಡಿಸುವ ಮೂಲಕ ಹರಕೆ ಸಲ್ಲಿಸಿದರು.
ಅಲ್ಲದೆ ತಾಲೂಕು ವ್ಯಾಪ್ತಿಯ ಬಹುತೇಕ ದೇಗುಲಗಳಲ್ಲಿ ವಿಶೇಷ ಪೂಜಾ ಕೈಂಕರ್ಯಗಳ ಜೊತೆಗೆ ಹೋಮ-ಹವನ ಹಾಗೂ ಅನ್ನದಾಸೋಹ ಕಾರ್ಯಕ್ರಮಗಳು ಜರುಗಿದವು. ಭಕ್ತರು ಹಣ್ಣು-ಕಾಯಿ ಅರ್ಪಿಸಿ ಗಂಧ-ಕರ್ಪೂರ ಬೆಳಗಿಸಿ ಭಕ್ತಿ ಭಾವದಲಿ ತೇಲಿದರು.










