ಬೆಂಗಳೂರು : ಬಿಗ್ ಬಾಸ್ ಕನ್ನಡ ಸೀಸನ್ 12ರ ಫಿನಾಲೆಗೆ ಇದೀಗ ಕೇವಲ ಎರಡು ವಾರಗಳು ಮಾತ್ರ ಬಾಕಿ ಉಳಿದಿವೆ. ಕಳೆದ ಭಾನುವಾರ ನಟಿ ಸ್ಪಂದನಾ ಸೋಮಣ್ಣ ಬಿಗ್ ಬಾಸ್ ಮನೆಯಿಂದ ಹೊರ ಬಂದಿದ್ದಾರೆ. ಮನೆಯಿಂದ ಹೊರಬಂದ ನಂತರ ನೀಡಿದ ಸಂದರ್ಶನದಲ್ಲಿ, ಈ ಬಾರಿ ಬಿಗ್ ಬಾಸ್ ಟ್ರೋಫಿ ಯಾರಿಗೆ ಸಿಗಬಹುದು ಎಂಬುದರ ಬಗ್ಗೆ ಸ್ಪಂದನಾ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಯಾರು ಗೆಲ್ಲುತ್ತಾರೆ?
ಸಂದರ್ಶನದಲ್ಲಿ ಮಾತನಾಡಿದ ಸ್ಪಂದನಾ ಸೋಮಣ್ಣ, “ನಾನು ಮನೆಯಲ್ಲಿ ಇನ್ನೂ ಉಳಿದುಕೊಂಡಿದ್ದರೆ ಫಿನಾಲೆಯಲ್ಲಿ ನಾನೂ ಇರ್ತಿದ್ದೆ. ಆದರೆ ಅದು ಈಗ ಸಾಧ್ಯವಿಲ್ಲ” ಎಂದು ಹೇಳಿದ್ದಾರೆ. ಜೊತೆಗೆ ಬಿಗ್ ಬಾಸ್ ಯಾರು ಗೆಲ್ಲಬೇಕು ಮತ್ತು ಯಾರು ಗೆಲ್ಲುವ ಸಾಧ್ಯತೆ ಹೆಚ್ಚು ಎಂಬುದರ ಬಗ್ಗೆಯೂ ಅವರು ಸ್ಪಷ್ಟವಾಗಿ ಮಾತನಾಡಿದ್ದಾರೆ.
ಸ್ಪಂದನಾ ಸೋಮಣ್ಣ ಭವಿಷ್ಯ ನುಡಿ
ಗಿಲ್ಲಿ ನಟ, ಧನುಷ್, ರಕ್ಷಿತಾ ಶೆಟ್ಟಿ, ಧ್ರುವಂತ್ ಹಾಗೂ ಅಶ್ವಿನಿ ಗೌಡ ಟಾಪ್ ಫೈವ್ಗೆ ಸೇರುತ್ತಾರೆ ಎಂದು ಸ್ಪಂದನಾ ಹೇಳಿದ್ದಾರೆ. ರಘು, ರಾಶಿಕಾ ಶೆಟ್ಟಿ ಮತ್ತು ಕಾವ್ಯಾ ಫಿನಾಲೆಗೆ ಬರಲಾರರು ಎಂಬುದನ್ನೂ ಅವರು ಸ್ಪಷ್ಟಪಡಿಸಿದ್ದಾರೆ.
“ಧನುಷ್ ಗೆಲ್ಲಬೇಕು ಅನ್ನೋದು ನನ್ನ ಆಸೆ. ಆದರೆ ಬಿಗ್ ಬಾಸ್ ಸೀಸನ್ 12ರ ವಿನ್ನರ್ ಆಗೋದು ಗಿಲ್ಲಿ ನಟನೇ” ಎಂದು ಸ್ಪಂದನಾ ಭವಿಷ್ಯ ನುಡಿದ್ದಾರೆ. ಜೊತೆಗೆ, “ನನಗೆ ಧ್ರುವಂತ್ ಆಟ ಹೆಚ್ಚು ಇಷ್ಟವಿಲ್ಲ. ಆದರೂ ಜನರಿಗೆ ಅವರ ಆಟ ಇಷ್ಟವಾಗಿರುವ ಕಾರಣ ಅವರು ಫಿನಾಲೆವರೆಗೂ ಬರಬಹುದು” ಎಂದರು.
ಮಾಳು ಹೇಳಿಕೆಗೆ ಪ್ರತಿಕ್ರಿಯೆ
ಮನೆಯಿಂದ ಹೊರಬಂದ ಬಳಿಕ ಮಾಳು ನಿಪನಾಳ, “ನಾನು ಸ್ಪಂದನಾಗಿಂತ ಮನೆಯಲ್ಲಿ ಉಳಿಯಲು ಅರ್ಹನಾಗಿದ್ದೆ” ಎಂದು ಹೇಳಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿದ ಸ್ಪಂದನಾ ಸೋಮಣ್ಣ, “ನಾನು ಅವರ ಸಂದರ್ಶನ ನೋಡಿಲ್ಲ. ಅದನ್ನು ನೋಡಬೇಕು” ಎಂದು ಸೂಕ್ಷ್ಮವಾಗಿ ಉತ್ತರಿಸಿದ್ದಾರೆ.
ಮನೆಯವರ ಸಹಕಾರ
ಟಾಸ್ಕ್ ವೇಳೆ ನನ್ನ ಕಾಲಿಗೆ ಪೆಟ್ಟು ಬಿದ್ದಾಗ ಮನೆಯಲ್ಲಿದ್ದ ಎಲ್ಲ ಸದಸ್ಯರೂ ನನಗೆ ತುಂಬಾ ಸಹಕಾರ ನೀಡಿದರು ಎಂದು ಸ್ಪಂದನಾ ಹೇಳಿದ್ದಾರೆ. ಆ ಸಮಯದಲ್ಲಿ ನಾನು ನನ್ನ ಪರ್ಸನಲ್ ಕೆಲಸಗಳನ್ನೂ ಮಾಡಿಕೊಳ್ಳಲು ಆಗುತ್ತಿರಲಿಲ್ಲ. ಆದರೆ ತನ್ನ ಕೆಲಸಗಳನ್ನೇ ಬಿಟ್ಟು ಗಿಲ್ಲಿ ನಟ ಕೂಡ ನನ್ನನ್ನು ಚೆನ್ನಾಗಿ ನೋಡಿಕೊಂಡರು ಎಂದು ಅವರು ಮನಮುಟ್ಟುವಂತೆ ಹೇಳಿದ್ದಾರೆ.










