ಹಾಸನ: ದೇಹಕ್ಕೆ ಆಗುವ ಗಾಯವನ್ನು ವಿಜ್ಞಾನದಿಂದ ಪರಿಹರಿಸಬಹುದು ಆದರೆ ಮನಸ್ಸಿಗೆ ಆಗುವ ಗಾಯಗಳಿಂದ ಮುಕ್ತಿ ಪಡೆಯಲು ಸಾಹಿತ್ಯ ಅತ್ಯವಶ್ಯವಾಗಿದೆ ಎಂದು ಲೇಖಕ ಜೋಗಿ ಅವರು ಹೇಳಿದರು.
ನಗರದ ವಿಜಯ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಹಮ್ಮಿಕೊಂಡಿರುವ ಎರಡು ದಿನಗಳ The Hassan Literature Festival 2026 (THLF) ಉದ್ಘಾಟಿಸಿ ಮಾತನಾಡಿ, ಪ್ರತಿಯೊಬ್ಬರ ಬದುಕಿನಲ್ಲಿ ಪುಸ್ತಕ ಮಹತ್ವದ್ದಾಗಿದೆ. ಮನಸ್ಸಿನ ನೋವುಗಳನ್ನು ಮರೆಯಲು ಪುಸ್ತಕ ನೆರವಾಗುತ್ತದೆ ಎಂದರು.
ವಿದ್ಯಾರ್ಥಿಗಳು ಈಗಿನಿಂದಲೇ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಮೈಸೂರು, ಬೆಂಗಳೂರಿನಲ್ಲಿ ನಡೆಯುವ ಸಾಹಿತ್ಯೋತ್ಸವ ಮಾದರಿಯಲ್ಲಿ ಹಾಸನದಲ್ಲೂ ಈ ವರ್ಷದಿಂದ ಸಾಹಿತ್ಯೋತ್ಸವ ಪ್ರಾರಂಭವಾಗಬೇಕು. ಅದಕ್ಕೆ ವಿಜಯ ಶಾಲೆ ಮುನ್ನುಡಿ ಬರೆದಿದೆ ಎಂದರು.
ಜೈಪುರ ಸಾಹಿತ್ಯೋತ್ಸವ ದೇಶದ ಗಮನ ಸೆಳೆದಿದೆ.
ಸಾಹಿತ್ಯ ಮಕ್ಕಳಿಂದ ಶುರುವಾಗಬೇಕು ಎನ್ನುವುದನ್ನು ಅಲ್ಲಿ ನಾನು ಕಲಿತಿದ್ದೇನೆ. ಕಾರ್ಯಕ್ರಮದಲ್ಲಿ ಭಾಗವಹಿಸುವ ಮಕ್ಕಳು ಕಥೆ, ಕವನಗಳೊಂದಿಗೆ ಹಾಜರಾಗುತ್ತಾರೆ.
ನಮಿತಾ, ವಿಲಿಯಂ, ಸಂಜಯ್ ಎಂಬುವವರು ಜೈಪುರ ಸಾಹಿತ್ಯೋತ್ಸವ ಕೇವಲ ಒಂಬತ್ತು ಜನ ಪ್ರೇಕ್ಷಕರೊಂದಿಗೆ ಶುರು ಮಾಡಿದರು. ಆದರೆ ಇಂದು ಐದು ಲಕ್ಷ ಜನರು ಭಾಗವಹಿಸುತ್ತಾರೆ. ಸಣ್ಣ ಸಣ್ಣ ಆರಂಭಗಳು ನಂತರದ ದಿನಗಳಲ್ಲಿ ದೊಡ್ಡ ಫಲಿತಾಂಶ ನೀಡುತ್ತವೆ ಎಂದರು.
ನಮ್ಮ ಅರಿವಿನ ಫರಿದಿ ಹೆಚ್ಚಬೇಕೆಂದರೆ ಓದುವುದನ್ನು ಕಲಿಯಬೇಕು. ಸಾಹಿತ್ಯ ಒಡೆದ ಹೃದಯ ಜೊಡಿಸುತ್ತದೆ. ಅದಕ್ಕೆ ಸಾಹಿತ್ಯದಲ್ಲಿ ಪರಿಹಸರವಿದೆ. ಹಾಸನ ಜಿಲ್ಲೆಯವರೇ ಆದ ಎಸ್.ಎಲ್. ಭೈರಪ್ಪ, ಬೂಕರ್ ಪ್ರಶಸ್ತಿ ವಿಜೇತ ಬಾನು ಮುಷ್ತಾಕ್ ಅವರನ್ನು ವಿದ್ಯಾರ್ಥಿಗಳು ಪ್ರೇರಣೆಯಾಗಿ ಪಡೆಯಬೇಕೆಂದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಹೆಚ್.ಬಿ. ಮದನಗೌಡ ಮಾತನಾಡಿ, ಮಕ್ಕಳಲ್ಲಿ ಸಾಹಿತ್ಯ ಅಭಿರುಚಿ, ಪುಸ್ತಕ ಓದುವ ಹವ್ಯಾಸ ಬೆಳೆಸುವ ಪುಣ್ಯದ ಕೆಲಸವನ್ನು ವಿಜಯ ಶಾಲೆಯವರು ಮಾಡುತ್ತಿರುವುದು ಹೆಮ್ಮೆಯ ವಿಚಾರ ಎಂದರು.
ಇತ್ತೀಚೆಗೆ ಓದುವವರ ಸಂಖ್ಯೆ ಕ್ಷೀಣಿಸುತ್ತಿದೆ. ಸಾಹಿತ್ಯದಿಂದ ವ್ಯಕ್ತಿತ್ವ ವಿಕಸನವಾಗುತ್ತದೆ. ಸಮಾಜ ಸ್ವಸ್ಥವಾಗಿರಬೇಕೆಂದರೆ ಸಾಂಸ್ಕೃತಿಕ ಚಟುವಟಿಕೆಗಳು ನಿರಂತರವಾಗಿರಬೇಕು. ಈ ನಾಡಿಗೆ ಒಳ್ಳೆಯ ಸಂದೇಶ ಕೊಡಬೇಕು. ಆ ನಿಟ್ಟಿನಲ್ಲಿ ವಿಜಯ ಶಾಲೆ ಒಳ್ಳೆಯ ಕಾರ್ಯಕ್ರಮ ಕೊಡುತ್ತಿದೆ. ಪ್ರತಿವರ್ಷ ಈ ಕಾರ್ಯಕ್ರಮ ನಡೆಯಲಿ ಎಂದು ಶುಭ ಹಾರೈಸಿದರು.
ವಿಜಯ ಶಾಲೆಯ ಸಂಸ್ಥಾಪಕ ನಿರ್ದೇಶಕಿ ತಾರಾ ಎಸ್. ಸ್ವಾಮಿ ಅಧ್ಯಕ್ಷೀಯ ನುಡಿಗಳನ್ನಾಡಿದರು. ಶೈಕ್ಷಣಿಕ ಮುಖ್ಯಸ್ಥೆ ಶ್ರೀ ಲಕ್ಷ್ಮಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಸಂಸ್ಥೆಯ ಅಧ್ಯಕ್ಷ ಸುಬ್ಬಸ್ವಾಮಿ, ಪ್ರಾಂಶುಪಾಲ ಕೆ.ಎಸ್.ನಂದೀಶ್, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಹಾಜರಿದ್ದರು.
Author Jogi said that science can heal injuries to the body, but literature is essential to get rid of injuries to the mind










