
ಬೆಂಗಳೂರು, ಜೂನ್ 16(www.kannadapost.com): ರಾಜಧಾನಿ ಬೆಂಗಳೂರಿನಲ್ಲಿ ಜೂನ್ 18ರಂದು ಬೇಕರಿ ಹಾಗೂ ಕಾಂಡಿಮೆಂಟ್ಸ್‌ಗಳು ಬಂದ್ ಆಗಲಿದ್ದು, ಸಾರ್ವಜನಿಕರಿಗೆ ಹಾಲು, ಟೀ, ಕಾಫಿ ಸೇರಿದಂತೆ ದಿನನಿತ್ಯದ ಕೆಲವು ಸೇವೆಗಳು ಲಭ್ಯವಾಗದ ಸಾಧ್ಯತೆ ಇದೆ.
ನಗರದಲ್ಲಿ ಹೆಚ್ಚುತ್ತಿರುವ ಹಫ್ತಾ ವಸೂಲಿ, ಪುಡಿ ರೌಡಿಗಳ ದಬ್ಬಾಳಿಕೆ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳ ಕಿರುಕುಳವನ್ನು ಖಂಡಿಸಿ ಬೇಕರಿ ಮತ್ತು ಕಾಂಡಿಮೆಂಟ್ಸ್ ಮಾಲೀಕರು ಬಂದ್‌ಗೆ ಕರೆ ನೀಡಿದ್ದಾರೆ.
ಬೇಕರಿ ಮತ್ತು ಕಾಂಡಿಮೆಂಟ್ಸ್ ಮಾಲೀಕರ ಸಂಘದ ಬೆಂಬಲದೊಂದಿಗೆ ಕಾರ್ಮಿಕ ಪರಿಷತ್ ಪ್ರತಿಭಟನೆ ನಡೆಸಲಿದ್ದು, ನಗರದಾದ್ಯಂತ ಸಾವಿರಾರು ಬೇಕರಿಗಳು ಹಾಗೂ ಕಾಂಡಿಮೆಂಟ್ಸ್‌ಗಳು ಒಂದು ದಿನ ಸಂಪೂರ್ಣವಾಗಿ ಕಾರ್ಯನಿರ್ವಹಿಸುವುದಿಲ್ಲ ಎಂದು ತಿಳಿಸಲಾಗಿದೆ.
ನಗರದಲ್ಲಿ ಪುಡಿ ರೌಡಿಗಳ ಅಟ್ಟಹಾಸ ಹೆಚ್ಚಾಗಿದ್ದು, ವ್ಯಾಪಾರಿಗಳಿಗೆ ನಿರಂತರವಾಗಿ ಹಣಕ್ಕಾಗಿ ಒತ್ತಡ ಹೇರುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇದರ ಜೊತೆಗೆ ಕೆಲವು ಪೊಲೀಸ್ ಅಧಿಕಾರಿಗಳು ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿಯಿಂದಲೂ ಅನಗತ್ಯ ಕಿರುಕುಳ ಎದುರಿಸುತ್ತಿರುವುದಾಗಿ ವ್ಯಾಪಾರಿಗಳು ದೂರಿದ್ದಾರೆ.
ಈ ಹಿನ್ನೆಲೆಯಲ್ಲಿ ಸರ್ಕಾರ ಹಾಗೂ ಪೊಲೀಸ್ ಇಲಾಖೆ ತಕ್ಷಣ ಕ್ರಮ ಕೈಗೊಂಡು ವ್ಯಾಪಾರಿಗಳಿಗೆ ರಕ್ಷಣೆ ಒದಗಿಸಬೇಕು, ಹಫ್ತಾ ವಸೂಲಿ ಮತ್ತು ರೌಡಿಗಳ ದಬ್ಬಾಳಿಕೆಗೆ ಕಡಿವಾಣ ಹಾಕಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.
ಜೂನ್ 18ರಂದು ನಡೆಯಲಿರುವ ಬಂದ್‌ನಿಂದ ನಗರದ ಅನೇಕ ಪ್ರದೇಶಗಳಲ್ಲಿ ಹಾಲು, ಟೀ, ಕಾಫಿ, ಬೇಕರಿ ಉತ್ಪನ್ನಗಳು ಹಾಗೂ ಉಪಹಾರ ಸೇವೆಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.









