ಬೆಂಗಳೂರು: “ನನ್ನ ಆಸೆ ಈಡೇರಿಸು” ಎಂದು ಹೇಳಿ ಸೊಸೆಗೆ ಮಾವನೇ ಲೈಂಗಿಕ ಕಿರುಕುಳ ನೀಡಿದ ಆರೋಪ ರಾಜಧಾನಿಯಲ್ಲಿ ಕೇಳಿಬಂದಿದೆ. ಥಣಿಸಂಧ್ರದ ಪ್ರತಿಷ್ಠಿತ ಶಾಲೆಯ ಪ್ರಿನ್ಸಿಪಾಲ್ ಆಗಿರುವ ಮಹಿಳೆಗೆ, ಅವರ ಮಾವ ಹಾಗೂ ಕಾವಲ್ ಬೈರಸಂಧ್ರದ ಶಾಲೆಯೊಂದರ ಸ್ಥಾಪಕರಾಗಿರುವ ವ್ಯಕ್ತಿ ನಿರಂತರ ಕಿರುಕುಳ ನೀಡಿರುವ ಬಗ್ಗೆ ಆರ್.ಟಿ.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಿಷಯವನ್ನು ಮಗನಿಗೆ ತಿಳಿಸಿದರೆ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
2007ರಲ್ಲಿ ವಿವಾಹವಾದ ಬಳಿಕ ಆರಂಭದಲ್ಲಿ ಕುಟುಂಬ ಜೀವನ ಸುಸೂತ್ರವಾಗಿತ್ತು. ಆದರೆ ಪತ್ನಿಯ ಸಾವಿನ ಬಳಿಕ ಎರಡನೇ ಮದುವೆಯಾಗಿದ್ದ ಮಾವ, ಸೊಸೆಯ ಮೇಲೆಯೇ ಅನುಚಿತ ವರ್ತನೆ ತೋರಲು ಆರಂಭಿಸಿದ್ದಾನೆ ಎಂದು ಆರೋಪಿಸಲಾಗಿದೆ. ಪಕ್ಕದ ಅಪಾರ್ಟ್‌ಮೆಂಟ್‌ನಲ್ಲಿ ವಾಸವಿದ್ದ ಆತ, ಮಹಿಳೆ ಮನೆಯಲ್ಲಿ ಒಬ್ಬಳೇ ಇರುವ ಸಂದರ್ಭಗಳನ್ನು ಬಳಸಿಕೊಂಡು ಕಿರುಕುಳ ನೀಡುತ್ತಿದ್ದನು ಎನ್ನಲಾಗಿದೆ.
ಅಸಭ್ಯವಾಗಿ ಮಾತನಾಡುವುದು, ಬಲವಂತವಾಗಿ ಸ್ಪರ್ಶಿಸುವುದು, ಬಟ್ಟೆ ಬಿಚ್ಚಲು ಯತ್ನಿಸುವುದು ಸೇರಿದಂತೆ ಅನೇಕ ರೀತಿಯ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ ಎಂಬ ಆರೋಪ ಕೇಳಿಬಂದಿದೆ.
2020ರಿಂದಲೇ ಈ ಕಿರುಕುಳ ಆರಂಭವಾಗಿದ್ದು, ಭಯದಿಂದ ಸಂತ್ರಸ್ತೆ ಮೌನವಾಗಿದ್ದಳು ಎಂದು ತಿಳಿದುಬಂದಿದೆ. ಬಳಿಕ ಮಕ್ಕಳಿಗೂ ಕೊಲೆ ಬೆದರಿಕೆ ಹಾಕಿ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ. ಅಪಾರ್ಟ್‌ಮೆಂಟ್ ಲಿಫ್ಟ್ ಹಾಗೂ ಶಾಲೆಯ ಕಚೇರಿ ಕೊಠಡಿಯಲ್ಲಿಯೂ ಕಿರುಕುಳ ನೀಡಿರುವುದಾಗಿ ದೂರಿನಲ್ಲಿ ಹೇಳಲಾಗಿದೆ.
ಕೊನೆಗೆ ವಿಷಯವನ್ನು ಪತಿಗೆ ತಿಳಿಸಿದ ಬಳಿಕ ಕುಟುಂಬದ ಹಿರಿಯರು ಎಚ್ಚರಿಕೆ ನೀಡಿದರೂ, ಆರೋಪಿ ತನ್ನ ವರ್ತನೆ ಮುಂದುವರಿಸಿದ್ದಾನೆ ಎನ್ನಲಾಗಿದೆ. ಸೊಸೆಯ ಸೌಂದರ್ಯ ಕುರಿತು ಪತ್ರ ಬರೆದು ಓದುತ್ತಿದ್ದಾನೆ ಎಂಬ ಆರೋಪವೂ ಇದೆ.
ಇತ್ತೀಚೆಗೆ ಮತ್ತೆ ಕಿರುಕುಳ ನೀಡಲು ಯತ್ನಿಸಿದ ವೇಳೆ ಮಹಿಳೆ ವಿರೋಧ ವ್ಯಕ್ತಪಡಿಸಿದ್ದರಿಂದ ಹಲ್ಲೆ ನಡೆಸಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಹಿನ್ನೆಲೆಯಲ್ಲಿ ಸಂತ್ರಸ್ತೆ ಮಾವನ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.










