ಹಾಸನ, ಜೂನ್ 16, 2025: ಜಿಲ್ಲೆಯ ಮಲೆನಾಡು ಭಾಗದಲ್ಲಿ ಧಾರಾಕಾರ ಮಳೆ ಮತ್ತು ಬಿರುಗಾಳಿಯಿಂದಾಗಿ ಸಕಲೇಶಪುರ ತಾಲ್ಲೂಕಿನ ಹೆಗ್ಗದ್ದೆ ಗ್ರಾಮದ ಬಳಿಯ ಶಿರಾಡಿಘಾಟ್ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಪುನಃ ಭೂಕುಸಿತ ಸಂಭವಿಸಿದೆ.
ಮೊದಲೇ ಭೂಕುಸಿತದಿಂದಾಗಿ ಒಂದು ಬದಿಯ ರಸ್ತೆಯನ್ನು ಅಧಿಕಾರಿಗಳು ಬಂದ್ ಮಾಡಿದ್ದರು. ಹಿಟಾಚಿ ಯಂತ್ರಗಳ ಮೂಲಕ ಮಣ್ಣು ತೆರವು ಕಾರ್ಯಾಚರಣೆ ನಡೆಯುತ್ತಿದ್ದ ವೇಳೆ ಮತ್ತೊಮ್ಮೆ ಹೆಚ್ಚಿನ ಪ್ರಮಾಣದಲ್ಲಿ ಭೂಮಿ ಕುಸಿದಿದೆ. ಮರಗಳು, ಮಣ್ಣು ಮತ್ತು ಕಲ್ಲುಬಂಡೆಗಳು ರಸ್ತೆಗೆ ಜಾರಿ ಬರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ.
ಅಧಿಕಾರಿಗಳು ರಸ್ತೆ ಸಂಚಾರವನ್ನು ಮೊದಲೇ ನಿಷೇಧಿಸಿದ್ದರಿಂದ ಅನಾಹುತ ತಪ್ಪಿದೆ. ಮಣ್ಣು ತೆರವು ಕಾರ್ಯಾಚರಣೆ ನಡೆಯುತ್ತಿದ್ದು, ಹಿಟಾಚಿಗಳೊಂದಿಗೆ ಸ್ಥಳದಲ್ಲೆ ಇರುವ ಅಧಿಕಾರಿಗಳು ಭೂ ಕುಸಿತದಿಂದ ರಸ್ತೆಗೆ ಬರುವ ಮಣ್ಣನ್ನು ತೆರವುಗೊಳಿಸುತ್ತಾ ಸಂಚಾರ ಸುಗಮಗೊಳಿಸಲು ಪ್ರಯತ್ನಿಸುತ್ತಿದ್ದಾರೆ.









