20.1 C
Munich
Home ಕ್ರೈಮ್‌ ಅಪರಾಧ ಜಗತ್ತು ಮಾಸ್ತಿಗೌಡ ಭೀಕರ ಹತ್ಯೆ ಕೇಸ್ : 9 ಮಂದಿ ಕೊಲೆಗಡುಕರಿಗೆ ಜೀವಾವಧಿ ಶಿಕ್ಷೆ- ಯಾಚೇನಹಳ್ಳಿ...

ಮಾಸ್ತಿಗೌಡ ಭೀಕರ ಹತ್ಯೆ ಕೇಸ್ : 9 ಮಂದಿ ಕೊಲೆಗಡುಕರಿಗೆ ಜೀವಾವಧಿ ಶಿಕ್ಷೆ- ಯಾಚೇನಹಳ್ಳಿ ಚೇತು ಅಂಡ್ ಗ್ಯಾಂಗ್‌ಗೆ ದಂಡನೆ

ಚನ್ನರಾಯಪಟ್ಟಣ: ಪಟ್ಟಣದ ಧನಲಕ್ಷ್ಮಿ ಚಿತ್ರ ಮಂದಿರದ ಬಳಿ ಹಾಡಹಗಲೇ ನಡೆದು ಇಡೀ ತಾಲೂಕನ್ನೇ ಬೆಚ್ಚಿ ಬೀಳಿಸಿದ್ದ ಹೊನ್ನಮಾರನಹಳ್ಳಿಯ ಮಾಸ್ತಿಗೌಡ ಅಲಿಯಾಸ್ ಮಾಸ್ತಿ ಕೊಲೆ ಪ್ರಕರಣದ ಒಟ್ಟು ೧೧ ಆರೋಪಿಗಳ ಪೈಕಿ ಎ೧ ಆರೋಪಿ ಯಾಚನೇಹಳ್ಳಿ ಚೇತು ಸೇರಿದಂತೆ ೯ ಮಂದಿಗೆ ಜೀವಾವಧಿ ಶಿಕ್ಷೆಯಾಗಿದೆ.

ಕೊಲೆಯಾದ ಮಾಸ್ತಿಗೌಡ

ಗಂಭೀರ ಪ್ರಕರಣದ ವಿಚಾರಣೆ ನಡೆಸಿದ ಪಟ್ಟಣದ ೪ನೇ ಜಿಲ್ಲಾ ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದೆ.
ಘಟನೆ ಹಿನ್ನೆಲೆ: ೨೦೨೩ ಜು.೪ ರಂದು ನಡು ರಸ್ತೆಯಲ್ಲೇ ಕಿಡಿಗೇಡಿಗಳ ತಂಡ ಮಾಸ್ತಿಗೌಡನನ್ನ ಅಟ್ಟಾಡಿಸಿ ಕೊಲೆ ಮಾಡಿತ್ತು. ಸಿನಿಮೀಯ ರೀತಿಯಲ್ಲಿ ನಡೆದಿದ್ದ ಈ ಘಟನೆ ಸಹಜವಾಗಿಯೇ ಮಹಿಳೆಯರು, ಮಕ್ಕಳಾದಿಯಾಗಿ ಜನರಲ್ಲಿ ಭಯ ಹುಟ್ಟಿಸಿತ್ತು.

ಯಾಚೇನಹಳ್ಳಿ ಚೇತು

ಹಳೇ ವೈಷಮ್ಯ ಹಿನ್ನೆಲೆಯಲ್ಲಿ ಗಡಿಪಾರಾಗಿ ಕಲಬುರಗಿ ಜೈಲಿನಲ್ಲಿರುವ ಯಾಚೇನಹಳ್ಳಿ ಚೇತು ಅಲ್ಲಿದ್ದುಕೊಂಡೇ ಸ್ಕೆಚ್ ಹಾಕಿ ತನ್ನ ಸಹಚರರ ಮೂಲಕ ಮಾಸ್ತಿಗೌಡನನ್ನು ಮುಗಿಸಿದ್ದ. ತನ್ನ ಸ್ವಗ್ರಾಮ ಹೊನ್ನಮಾರನಹಳ್ಳಿಯಲ್ಲಿ ಮನೆ ಕಟ್ಟಲು ಅಂದು ಟೈಲ್ಸ್ ಖರೀದಿ ಮಾಡಲು ಬಂದಿದ್ದ ಮಾಸ್ತಿಯನ್ನು ಹೊಂಚು ಹಾಕಿ ಕಾದು ಕುಳಿತಿದ್ದ ಗ್ಯಾಂಗ್‌ನಲ್ಲಿದ್ದ ಹುಲಿವಾಲ ಚೇತು, ಮಂಡ್ಯ ಶಿವು, ರಾಕಿ ಮೊದಲಾದವರು ಅಟ್ಟಾಡಿಸಿ ಸಾರ್ವಜನಿಕರ ಸಮ್ಮುಖದಲ್ಲೇ ಮಚ್ಚು ಲಾಂಗುಗಳಿಂದ ಕೊಚ್ಚಿ ಕೊಲೆಗೈದಯ ಬಳಿಕ ಇನ್ನೋವಾ ಕಾರಿನಲ್ಲಿ ಪರಾರಿಯಾಗಿದ್ದರು.

ಅಂದು ಎಸ್ಪಿ ಆಗಿದ್ದ ಹರಿರಾಂ ಶಂಕರ್ ಕೊಲೆಗಡುಕರ ಪತ್ತೆಗಾಗಿ
ವಿಶೇಷ ತಂಡ ರಚನೆ ಮಾಡಿದ್ದರು. ಆಗ ನಗರ ಠಾಣೆ ಇನ್ಸ್‌ಪೆಕ್ಟರ್ ಆಗಿದ್ದ ಕೆ.ಎಂ.ವಸಂತ್ ತನಿಖಾಧಿಕಾರಿಯಾಗಿದ್ದರು. ನಂತರ ಆರೋಪಿಗಳನ್ನು ಬಂಧಿಸಿ, ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಲಾಗಿತ್ತು. ವಿಚಾರಣೆ ನಡೆಸಿದ ಕೋರ್ಟ್, ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಕಲಬುರಗಿ ಜೈಲಿನಲ್ಲಿದ್ದುಕೊಂಡೇ ಕೊಲೆಗೆ ಸಂಚು ರೂಪಿಸಿದ್ದ ಯಾಚೇನಹಳ್ಳಿ ಚೇತು(ಎ೧), ಮಂಡ್ಯ ಶಿವಕುಮಾರ(ಎ೨), ಹುಲಿವಾಲ ಚೇತು ಅಲಿಯಾಸ್ ಚೇತನ್ (ಎ೩), ಹಾಸನದ ಆಲ್ದಳ್ಳಿ ರಾಕೇಶ(ಎ೪), ಸುಮಂತ(ಎ೫), ಮಲ್ಲೇನಹಳ್ಳಿ ಭರತ್(ಎ೬), ಮಂಚಿಗನಹಳ್ಳಿ ಹರೀಶ್(ಎ೭), ಮೊಟ್ಟೆ ಅಲಿಯಾಸ್ ರಾಹುಲ್(ಎ೮) ಮತ್ತು ಸ್ಥಳೀಯ ನಿವಾಸಿ ರಾಘು ಅಲಿಯಾಸ್ ರಾಘವೇಂದ್ರ(ಎ೯) ಎಂಬುವರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಇವರಲ್ಲಿ ಹರೀಶ್ ಮತ್ತು ಭರತ್ ಕೊಲೆಗೆ ಸಹಕಾರ ನೀಡಿದ್ದರೆ ರಾಘು ಹಣಕಾಸು ನೆರವು ನೀಡಿದ್ದ.

೧೦ನೇ ಮಂಡ್ಯದ ಸಂದೇಶ ಗೌಡ ಹಾಗೂ ೧೧ನೇ ಆರೋಪಿ ಬೆಂಗಳೂರಿನ ಗೋಪಿ ತಲಾ ಎರಡೂವರೆ ವರ್ಷಗಳ ಶಿಕ್ಷೆಗೆ ಗುರಿಯಾಗಿದ್ದಾರೆ. ಎಲ್ಲಾ ಆರೋಪಿಗಳಿಗೆ ತಲಾ ೨೫ ಸಾವಿರ ದಂಡ ವಿಧಿಸಲಾಗಿದೆ. ಸರ್ಕಾರದ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ಶ್ರೀನಿವಾಸ್ ವಾದ ಮಂಡಿಸಿದ್ದರು.

ಹಿಂದಿನ ಎಸ್ಪಿ ಹರಿರಾಂ ಶಂಕರ್, ಈಗಿನ ಎಸ್ಪಿ ಮೊಹಮದ್ ಸುಜೀತಾ, ಎಎಸ್ಪಿ ತಮ್ಮಯ್ಯ, ಡಿವೈಎಸ್ಪಿ ಪಿ.ರವಿಪ್ರಸಾದ್, ತನಿಖೆ ನಡೆಸಿ ಪಿಐ ಕೆ.ಎಂ.ವಸಂತ್, ಹಾಲಿ ಇನ್ಸ್‌ಪೆಕ್ಟರ್ ರಘುಪತಿ ಅವರ ಪರಿಶ್ರಮದಿಂದ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಿದೆ. ಕೊಲೆ ನಡೆದ ಹತ್ತೇ ತಿಂಗಳಲ್ಲಿ ವಿಚಾರಣೆ ಮುಗಿಸಿ ಕೊಲೆಗಡುಕರಿಗೆ ಶಿಕ್ಷೆಯಾಗಿದ್ದು, ತನಿಖಾಧಿಕಾರಿ ವೃತ್ತಿ ಪರತೆಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

ನಟೋರಿಯಸ್ ರೌಡಿ ಯಾಚೇನಹಳ್ಳಿ ಚೇತು ಕಲಬುರಗಿ ಜೈಲಲ್ಲಿದ್ದುಕೊಂಡೇ ಮಾಸ್ತಿಗೌಡನ ಕೊಲೆಗೆ ಸಂಚು ರೂಪಿಸಿ ಯಶಸ್ವಿಯಾಗಿದ್ದ. ಒಟ್ಟು ೨೭ ಅರಪಾಧ ಪ್ರಕರಣಗ, ೯ ಕೊಲೆ
ಕೇಸಲ್ಲಿ ಭಾಗಿಯಾಗಿದ್ದರೂ, ಒಂದರಲ್ಲೂ ಈತ ಆರೋಪಿ ಎಂದು ಸಾಬೀತಾಗಿರಲಿಲ್ಲ. ಆದರೆ ಈ ಕೇಸಿನಲ್ಲಿ ರೌಡಿಸಂ ಅಟ್ಟಹಾಸಕ್ಕೆ ಮಟ್ಟ ಹಾಕಲೇಬೇಕು ಎಂದು ಪಣತೊಟ್ಟ ಖಾಕಿ ಪಡೆ, ಕಠಿಣ ಶಿಕ್ಷೆ ವಿಧಿಸಲು ಶ್ರಮಿಸಲು ಮೂಲಕ ಸಾರ್ವಜನಿಕರ ಮೆಚ್ಚುಗೆಗೆ ಮೆಚ್ಚುಗೆಗೆ ಪಾತ್ರವಾಗಿದೆ.

error: Content is protected !!