ಹಾಸನ, ಜೂನ್ 13: ತಾಲ್ಲೂಕಿನ ಶಿವಯ್ಯನಕೊಪ್ಪಲು ಗ್ರಾಮದ ಸಮೀಪ ಕಳೆದ ಮೂರು ದಿನಗಳಿಂದ ಕಾಣಿಯಾಗಿದ್ದ ಮಹಿಳೆ, ಮರಕ್ಕೆ ನೇಣುಬಿಗಿದಿರುವ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ಪವಿತ್ರ (35) ಮೃತ ಮಹಿಳೆ. ಕಾಣೆಯಾಗಿದ್ದ ಅವರನ್ನು ಕುಟುಂಬಸ್ಥರು ಎಲ್ಲೆಡೆ ಹುಡುಕಾಡಿದ್ದರು. ಆದರೆ, ಯಾವುದೇ ಸುಳಿವು ಸಿಗದ ಕಾರಣ, ಪವಿತ್ರ ಅವರ ಪತಿ ಮನೋಜ್ ಗೊರೂರು ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು. ಇಂದು ಗ್ರಾಮದ ಸಮೀಪದಲ್ಲಿ ಪವಿತ್ರ ಮರಕ್ಕೆ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಪ್ರಾಥಮಿಕ ತನಿಖೆಯಲ್ಲಿ, ಸಾಲಬಾಧೆ ಮತ್ತು ಕೌಟುಂಬಿಕ ಕಲಹದಿಂದ ಮಹಿಳೆ ಆತ್ಮಹತ್ಯೆಗೆ ಶರಣಾಗಿರಬಹುದೆಂದು ಶಂಕಿಸಲಾಗಿದೆ. ಘಟನೆಯ ಕುರಿತು ಗೊರೂರು ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸುತ್ತಿದ್ದಾರೆ.










