ಆಸ್ಪತ್ರೆಯಿಂದ ನಾಪತ್ತೆಯಾಗಿದ್ದ ಹೆಡ್ ಕಾನ್ಸ್ಟೇಬಲ್ ಶವವಾಗಿ ಪತ್ತೆ

A police head constable, who was suffering from illness, committed suicide. The incident occurred on Wednesday evening near Gendekatte forest on the outskirts of the city

ಹಾಸನ: ಅನಾರೋಗ್ಯದಿಂದ ಬಳಲುತ್ತಿದ್ದ  ಪೊಲೀಸ್ ಹೆಡ್ ಕಾನ್ಸ್‌ಟೇಬಲ್ ಒಬ್ಬರು ಆತ್ಮಹತ್ಯೆಗೆ ಶರಣಾದ ಘಟನೆ ಬುಧವಾರ ಸಂಜೆ ನಗರ ಹೊರವಲಯದ ಗೆಂಡೆಕಟ್ಟೆ ಅರಣ್ಯದ ಬಳಿ ನಡೆದಿದೆ.

ಹೊಳೆನರಸೀಪುರ ಠಾಣೆ ಮುಖ್ಯಪೇದೆ  ನಟೇಶ್ (38) ಗೆಂಡೆಕಟ್ಟೆ ಅರಣ್ಯದ ಬಳಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮೂಲತಃ ಅರಕಲಗೂಡು ತಾಲ್ಲೂಕಿನ ಚಿಕ್ಕಬೊಮ್ಮನಹಳ್ಳಿ ಗ್ರಾಮದವರಾದ ನಟೇಶ್, 2008ರಲ್ಲಿ ನಾಗರಿಕ ಪೊಲೀಸ್ ಪೇದೆಯಾಗಿ ಆಯ್ಕೆಯಾಗಿದ್ದರು. ಅರಕಲಗೂಡು ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಅವರು ಕಳೆದ ಒಂದು ತಿಂಗಳ ಹಿಂದೆ ಮುಖ್ಯಪೇದೆಯಾಗಿ ಮುಂಬಡ್ತಿ ಪಡೆದು, ಹೊಳೆನರಸೀಪುರ ಪೊಲೀಸ್ ಠಾಣೆಗೆ ವರ್ಗಾವಣೆಗೊಂಡಿದ್ದರು.

ಕಳೆದ ಮೂರು ತಿಂಗಳಿಂದ ಮೂಳೆ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ನಟೇಶ್, ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಕಳೆದ ಒಂದು ವಾರದಿಂದ ಹಾಸನದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದ ಅವರು, ಇಂದು ಸಂಜೆ ಆಸ್ಪತ್ರೆಯಿಂದ ಕಾಣೆಯಾಗಿದ್ದರು. ಬಳಿಕ ಗೆಂಡೆಕಟ್ಟೆ ಅರಣ್ಯದ ಬಳಿ ಅವರು ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ಘಟನೆಯು ಬಡಾವಣೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.