ಕೊಣನೂರು: ಅರಕಲಗೂಡು ತಾಲೂಕು ಕೊಣನೂರು ಹೋಬಳಿ ಕೊಣನೂರು ಪಟ್ಟಣದ ಕಾವೇರಿ ನದಿಯಲ್ಲಿ ಇರುವ ತೂಗು ಸೇತುವೆ ವೀಕ್ಷಿಸಲು ಬಂದ ಪ್ರವಾಸಿಗರ ದಂಡು ತಂಡವಾಗಿ ಬಂದು ವೀಕ್ಷಿಸಿದರು.
ರಾಜ್ಯದ ಮೂಲೆ ಮೂಲೆಗಳಿಂದ ಪ್ರವಾಸಿಗರು ಮೈದುಂಬಿ ಹರಿಯುತ್ತಿರುವ ಕಾವೇರಿ ನದಿಯ ನಡುವೆ ನೈಸರ್ಗಿಕ ರಮಣೀಯವಾಗಿರುವ ತೂಗು ಸೇತುವೆ ವೀಕ್ಷಿಸಲು ಮತ್ತು ಸೆಲ್ಫಿ ತೆಗೆದುಕೊಳ್ಳಲು ಮುಗಿಬಿದ್ದರು. ಅರೆ ಮಲೆನಾಡು ಎಂದೆ ಖ್ಯಾತಿ ಹೊಂದಿರುವ ಕೊಡಗಿನ ಗಡಿ ಭಾಗವಾದ ಈ ಪಟ್ಟಣದಲ್ಲಿರುವ ತೂಗು ಸೇತುವೆ ಸುಂದರವಾಗಿರುತ್ತದೆ.
ಆದರೆ ಈ ತೂಗು ಸೇತುವೆ ಅವನತಿ ಹಂಚಿನಲ್ಲಿದ್ದು ಸುಮಾರು 30 ವರ್ಷಗಳ ಹಿಂದೆ ಜಿಲ್ಲಾ ಪಂಚಾಯಿತಿ ವತಿಯಿಂದ ನಿರ್ಮಾಣವಾಗಿದ್ದು ಇಲ್ಲಿಯವರೆಗೆ ಅದರ ಉಸ್ತುವಾರಿಯಾಗಲಿ ಅದರ ನಿರ್ವಹಣೆಯಾಗಲಿ ತಾಲೂಕು ಜಿಲ್ಲೆ ಮತ್ತು ಗ್ರಾಮ ಪಂಚಾಯಿತಿ ನಿರ್ವಹಣೆ ಮಾಡುವುದಿರುವುದೇ ಆತಂಕದ ವಿಚಾರವಾಗಿದೆ. ಹೀಗೆ ದುಃಸ್ಥಿತಿಯಲ್ಲಿರುವ ತೂಗು ಸೇತುವೆಯನ್ನು ಸಂಬಂಧಿಸಿದ ಅಧಿಕಾರಿಗಳು ಸರಿಪಡಿಸದಿದ್ದರೆ ಮುಂದೆ ತುಂಬಾ ಅನಾಹುತ ಪ್ರಾಣ ಹಾನಿಗಳು ಉಂಟಾಗಬಹುದು. ತುಂಬಾ ದಿನಗಳಿಂದ ಕಬ್ಬಿಣದಲ್ಲಿ ನಿರ್ಮಿಸಿರುವ ತೂಗು ಸೇತುವೆಯು ಮಳೆಬಿಸಿಲು ಪ್ರಕೃತಿಗೆ ತುಕ್ಕು ಹಿಡಿದಿದ್ದು ಜನ ಸಂಚರಿಸುವ ಭಾಗದಲ್ಲಿ ಸಾಕಷ್ಟು ಮುರಿದು ಹೋಗಿದ್ದು ಮುಂದಿನ ಅಪಾಯದ ಸೂಚನೆಯನ್ನು ನೋಡುಗರಿಗೆ ಎದ್ದು ಕಾಣುವಂತೆ ಭಾಸವಾಗುತ್ತಿದೆ.
ಇದರ ನಡುವೆ ಭಯ ಮತ್ತು ಆತಂಕದಲ್ಲಿ ಈ ಸೇತುವೆಯನ್ನು ಅವಲಂಬಿಸಿರುವ ಕಟ್ಟೆಪುರ ಮಾದಾಪುರ ಅನೇಕ ಹಳ್ಳಿಯ ಜನರಿಗೆ ಕೊಣನೂರು ಪಟ್ಟಣ ಸಮೀಪ ಮಾರ್ಗವಾಗಿದ್ದು ಈ ಸೇತುವೆ ಈ ಗ್ರಾಮಗಳಿಗೆ ಅನಿವಾರ್ಯವಾಗಿದೆ.
ಮತ್ತೊಂದೆಡೆ ಪ್ರವಾಸಿಗರಿಗೆ ಶಾಲೆ ಕಾಲೇಜು ಮಕ್ಕಳಿಗೆ ಮದುವೆ ಶುಭ ಸಮಾರಂಭಗಳ ಫೋಟೋ ಶೂಟ್ ಕಾರ್ಯಕ್ರಮಗಳಿಗೆ ಬಳಕೆಯಾಗುತ್ತಿದ್ದು ಸಂತೋಷದ ವಿಚಾರವಾಗಿದೆ. ಇದನ್ನು ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡಿದ್ದರೆ ಮುಂದೆ ಈ ತೂಗು ಸೇತುವೆ ಪ್ರವಾಸಿಗರ ತಾಣವಾಗಿ ಮಾರ್ಪಡುತ್ತದೆ ಎಂದು ಪ್ರವಾಸಿಗರು ಪತ್ರಿಕೆಯೊಂದಿಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು.










