ಹಾಸನ: ಮಧ್ಯಸ್ಥಿಕೆಯು ರಾಜಿ ಸಂಧಾನದ ಫಲಿತ ಪ್ರತಿ ರೂಪವಾಗಿದ್ದು ಕಡಿಮೆ ಅವಧಿಯಲ್ಲಿ ಶೀಘ್ರ ಪರಿಹಾರ ಕಂಡುಕೊಳ್ಳಬಹುದು ಇದರಿಂದ ಉಭಯ ಪಕ್ಷಗಾರರು ಸಮಯ, ಹಣದ ಉಳಿತಾಯವನ್ನು ಮಾಡಬಹುದಾಗಿದೆ ಎಂದು ಪ್ರದಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಹೇಮಾವತಿ ತಿಳಿಸಿದರು.
ರಾಷ್ಟ್ರವ್ಯಾಪಿ ಮಧ್ಯಸ್ಥಿಕೆಯ ಕುರಿತು 90 ದಿನಗಳ ಕಾಲ ವಿಶೇಷ ಆಂದೋಲನ ನಡೆಯುತ್ತಿದ್ದು ಸದರಿ ಪ್ರಕ್ರಿಯೆಯ ಮೂಲಕ ಉಭಯ ಪಕ್ಷಗಾರರು ಇದರ ಸದುಪಯೋಗ ಪಡೆದುಕೊಳ್ಳಬಹುದಾಗಿದೆ. ತರಬೇತಿ ಹೊಂದಿದ ವಕೀಲರು ತಟಸ್ಥವಾಗಿ ಮಧ್ಯಸ್ಥಿಕೆ ಮಾಡುವ ಮೂಲಕ ವಿವಾದವನ್ನು ಸೃಜನಾತ್ಮಕವಾಗಿ ಇತ್ಯರ್ಥಪಡಿಸಲು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವರು. ಸದರಿ ಪ್ರಕ್ರಿಯೆಯಲ್ಲಿ ಪಕ್ಷಗಾರರು ಮತ್ತು ಅವರ ವಕೀಲರು ಸಕ್ರಿಯವಾಗಿ ಪಾಲ್ಗೊಳ್ಳಲು ವಿಶಿಷ್ಟ ಅವಕಾಶವನ್ನು ಕಲ್ಪಿಸಲಾಗುತ್ತದೆ. ಮಧ್ಯಸ್ಥಿಕೆಯು ಸ್ವಪ್ರೇರಿತವಾದುದಲ್ಲದೆ ಗೌಪ್ಯವಾದುದಾಗಿದೆ ಮತ್ತು ಇದು ಪಾರದರ್ಶಕತೆಯಿಂದ ಕೂಡಿದೆ.
ಮಧ್ಯಸ್ಥಿಕೆಯಲ್ಲಿ ಕಾಯ್ದೆಯ ನಿಯಮಗಳು ಹಾಗೂ ಸಾಕ್ಷ್ಯಗಳ ಬಗೆಗೆ ಗಮನ ಕೊಡುವುದರ ಬದಲಾಗಿ ಮಧ್ಯಸ್ಥಿಕೆಯು ಪಕ್ಷಗಾರರ ಹಿತಾಸಕ್ತಿಗಳ ಬಗೆಗೆ ಗಮನ ಹರಿಸುತ್ತದೆ ಹಾಗೂ ಪಕ್ಷಗಾರರು ತಾವೇ ವಿವಾದವನ್ನು ಇತ್ಯರ್ಥಗೊಳಿಸಿಕೊಳ್ಳಲು ಶಕ್ತರಾಗುವಂತೆ ಮಾಡುತ್ತದೆ. ಮಧ್ಯಸ್ಥಿಕೆಯಲ್ಲಿ ಕಡಿಮೆ ಕಾಲಮಿತಿಯಲ್ಲಿ ಆಪ್ತ ಸಮಾಲೋಚನೆ ಮೂಲಕ ಮಧ್ಯಸ್ಥಿಕೆ ನಡೆಯುವುದರಿಂದ ಅರ್ಥಪೂರ್ಣ ಚರ್ಚೆ ನಡೆದು ಪ್ರಕರಣವು ಶೀಘ್ರ ಮತ್ತು ವ್ಯಾಜ್ಯ ಮುಕ್ತವಾಗಿ ಬಗೆಹರಿಯಲು ಸಹಾಯವಾಗುತ್ತದೆ.
ಮಧ್ಯಸ್ಥಿಕೆಯಲ್ಲಿ ಕೌಟುಂಬಿಕ ಪ್ರಕರಣಗಳು, ಸಿವಿಲ್ ವ್ಯಾಜ್ಯಗಳು, ವಿಚ್ಛೇಧನ ಪ್ರಕರಣಗಳು, ಚೆಕ್ ಬೌನ್ಸ್ ಪ್ರಕರಣಗಳು ಇವುಗಳನ್ನು ಬಗೆಹರಿಸಬಹುದಾಗಿದೆ. 90 ದಿನಗಳ ವಿಶೇಷ ಮಧ್ಯಸ್ಥಿಕೆಯು ಪ್ರತಿ ದಿನವೂ ನಡೆಯಲಿದ್ದು ನ್ಯಾಯಾಲಯಗಳಲ್ಲಿ ಬಾಕಿಯುಳಿದಿರುವ ಪ್ರಕರಣಗಳ ಸಂಖ್ಯೆಯನ್ನು ಕಡಿಮೆ ಮಾಡುವ ಉದ್ದೇಶವನ್ನು ಹೊಂದಿದೆ ಆದುದರಿಂದ ವಕೀಲರು ತಮ್ಮ ಕಕ್ಷಿದಾರರ ಮನವೊಲಿಸುವ ಮೂಲಕ ಮಧ್ಯಸ್ಥಿಕೆಯ ವಿಶೇಷ ಆಂದೋಲನವನ್ನು ಸದುಪಯೋಗ ಮಾಡಿಕೊಳ್ಳಬಹುದಾಗಿದೆ ಎಂದು ತಿಳಿಸಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ದಾಕ್ಷಾಯಿಣಿ ಉಪಸ್ಥಿತರಿದ್ದರು.










