20.1 C
Munich
Home ಕ್ರೈಮ್‌ ಹಾಸನ: ಪತ್ನಿ ಅನುಮಾನಾಸ್ಪದ ಸಾವು, ಪತಿಯೇ ಕೊಂದಿದ್ದಾನೆಂದು ಶವ ಇರಿಸಿ ಪ್ರತಿಭಟನೆ ನಡೆಸಿದ ಪೋಷಕರು

ಹಾಸನ: ಪತ್ನಿ ಅನುಮಾನಾಸ್ಪದ ಸಾವು, ಪತಿಯೇ ಕೊಂದಿದ್ದಾನೆಂದು ಶವ ಇರಿಸಿ ಪ್ರತಿಭಟನೆ ನಡೆಸಿದ ಪೋಷಕರು

A housewife has died under suspicious circumstances in Ankanahalli village in Channarayapatna taluk, and it has been alleged that her husband murdered her.

ಹಾಸನ, ಜುಲೈ 20, 2025: ಚನ್ನರಾಯಪಟ್ಟಣ ತಾಲೂಕಿನ ಅಂಕನಹಳ್ಳಿ ಗ್ರಾಮದಲ್ಲಿ ಗೃಹಿಣಿಯೊಬ್ಬರು ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದು, ಪತಿಯೇ ಹತ್ಯೆ ಮಾಡಿರುವ ಆರೋಪ ಕೇಳಿ ಬಂದಿದೆ.

ಚಂದ್ರಕಲಾ (27) ಅವರನ್ನು ವರದಕ್ಷಿಣೆಗಾಗಿ ಪತಿ ಆನಂದ್ (35) ಕೊಲೆ ಮಾಡಿ, ಶವವನ್ನು ನೇಣಿಯೆ ಬಿಗಿದಿದ್ದಾನೆ ಎಂದು ಮೃತಳ ಸಂಬಂಧಿಕರು ಆರೋಪಿಸಿದ್ದು, ಈ ಘಟನೆಯಿಂದ ಆಕ್ರೋಶಗೊಂಡ ಚಂದ್ರಕಲಾ ಅವರ ಪೋಷಕರು ಮತ್ತು ಸಂಬಂಧಿಕರು ಆನಂದ್‌ನ ಮನೆ ಎದುರು ಶವವಿಟ್ಟು ಪ್ರತಿಭಟನೆ ನಡೆಸಿದ್ದಾರೆ.

ಕೆ.ಆರ್.ಪೇಟೆ ತಾಲೂಕಿನ ಹೆಗ್ಗಡಿಹಳ್ಳಿ ಗ್ರಾಮದವರಾದ ಚಂದ್ರಕಲಾ, ಏಳು ವರ್ಷಗಳ ಹಿಂದೆ ಆನಂದ್‌ನೊಂದಿಗೆ ವಿವಾಹವಾಗಿದ್ದರು. ಆನಂದ್ ಸಾಕಷ್ಟು ಸಾಲ ಮಾಡಿದ್ದು, ಈ ಕಾರಣಕ್ಕೆ ವರದಕ್ಷಿಣೆ ಹಣ ತರುವಂತೆ ಚಂದ್ರಕಲಾರನ್ನು ಪದೇ ಪದೇ ಪೀಡಿಸುತ್ತಿದ್ದ ಎನ್ನಲಾಗಿದೆ.

ಈ ವಿಚಾರಕ್ಕೆ ಕೆಲವು ಬಾರಿ ಚಂದ್ರಕಲಾ ಮೇಲೆ ಹಲ್ಲೆಯನ್ನೂ ನಡೆಸಿದ್ದ ಎಂದು ಆರೋಪಿಸಲಾಗಿದೆ. ನಿನ್ನೆ ರಾತ್ರಿ ಆನಂದ್ ತನ್ನ ಪತ್ನಿಯ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿ, ನಂತರ ಶವವನ್ನು ನೇಣಿಗೆ ಕಟ್ಟಿರುವ ಆರೋಪವಿದೆ. ಘಟನೆಯ ನಂತರ ಆನಂದ್ ಸ್ಥಳದಿಂದ ಎಸ್ಕೇಪ್ ಆಗಿದ್ದಾನೆ ಎಂದು ತಿಳಿದುಬಂದಿದೆ.

ಪ್ರತಿಭಟನೆ ಮತ್ತು ಪೊಲೀಸ್ ಕಾರ್ಯಾಚರಣೆ: ಚಂದ್ರಕಲಾ ಅವರ ಪೋಷಕರು ಮತ್ತು ಸಂಬಂಧಿಕರು ಆನಂದ್‌ನ ಮನೆ ಎದುರು ಶವವಿಟ್ಟು, “ಆನಂದ್ ಸ್ಥಳಕ್ಕೆ ಬರುವವರೆಗೂ ಶವವನ್ನು ಮೇಲೆತ್ತಲು ಬಿಡುವುದಿಲ್ಲ” ಎಂದು ಪಟ್ಟುಹಿಡಿದು ಪ್ರತಿಭಟನೆ ನಡೆಸಿದ್ದಾರೆ. ಕೆಲವರು ಆನಂದ್‌ನ ಮನೆಗೆ ನುಗ್ಗಲು ಯತ್ನಿಸಿದ್ದು, ಪರಿಸ್ಥಿತಿಯನ್ನು ನಿಯಂತ್ರಿಸಲು ಶ್ರವಣಬೆಳಗೊಳ ಪೊಲೀಸ್ ಠಾಣೆಯ ಸಿಬ್ಬಂದಿ ಹರಸಾಹಸ ಪಡಬೇಕಾಯಿತು. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಎಎಸ್‌ಪಿ ತಮ್ಮಯ್ಯ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ತನಿಖೆ ಆರಂಭ: ಶ್ರವಣಬೆಳಗೊಳ ಪೊಲೀಸ್ ಠಾಣೆಯಲ್ಲಿ ಕೊಲೆ ಆರೋಪದಡಿ ಆನಂದ್ ವಿರುದ್ಧ ಪ್ರಕರಣ ದಾಖಲಾಗಿದೆ. ಆನಂದ್‌ನನ್ನು ಬಂಧಿಸಲು ಪೊಲೀಸರು ತೀವ್ರ ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ. ಚಂದ್ರಕಲಾ ಅವರ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

ಗ್ರಾಮಸ್ಥರ ಆಕ್ರೋಶ:“ವರದಕ್ಷಿಣೆಗಾಗಿ ಚಂದ್ರಕಲಾರನ್ನು ಕೊಲೆ ಮಾಡಲಾಗಿದೆ. ಆನಂದ್‌ಗೆ ಕಠಿಣ ಶಿಕ್ಷೆಯಾಗಬೇಕು,” ಎಂದು ಗ್ರಾಮಸ್ಥರು ಮತ್ತು ಚಂದ್ರಕಲಾ ಅವರ ಸಂಬಂಧಿಕರು ಆಗ್ರಹಿಸಿದ್ದಾರೆ. ಪೊಲೀಸರು ಈ ಘಟನೆಯ ಸಂಪೂರ್ಣ ತನಿಖೆಗೆ ಮುಂದಾಗಿದ್ದು, ಶೀಘ್ರವೇ ಆರೋಪಿಯನ್ನು ಬಂಧಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

 

error: Content is protected !!