ಹಾಸನ:ಜಿಲ್ಲಾ ಬ್ರಾಹ್ಮಣ ಸಮಾಜದ ವತಿಯಿಂದ ಧಾರ್ಮಿಕ ಚೇತನ-ಚಿಂತನ ವೃದ್ಧಿಸುವ ಉದ್ದೇಶದಿಂದ ವಿಷ್ಣು ತತ್ತ್ವದ ಸಮಾವೇಶ 2025 ಎಂಬ ಭವ್ಯ ಧಾರ್ಮಿಕ ಕಾರ್ಯಕ್ರಮ ಆಯೋಜಿಸಲಾಗಿದೆ. ಇದೇ ಡಿ.27, 28 ರಂದು ನಗರದ ಶ್ರೀನಿವಾಸ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ ಎಂದು ಸಮಾಜದ ಸುರೇಶ್ ಇಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಮಾವೇಶದ ಅಂಗವಾಗಿ ಲೋಕ ಕಲ್ಯಾಣಾರ್ಥವಾಗಿ ಲೋಕಹಿತ ಕೋಟಿ ಗಾಯತ್ರಿ ಜಪಯಜ್ಞ, ದಶಲಕ್ಷ ಗಾಯತ್ರಿ ಹವನ ಸೇರಿದಂತೆ ವಿವಿಧ ವೈದಿಕ ಮತ್ತು ಆಧ್ಯಾತ್ಮಿಕ ಕಾರ್ಯಕ್ರಮ ಆಯೋಜಿಸಲಾಗಿದೆ.
ವೇದೋಕ್ತ ಮಂತ್ರೋಚ್ಚಾರಣೆಯೊಂದಿಗೆ ನಡೆಯುವ ಹವನಗಳು ಭಕ್ತರಲ್ಲಿ ಧಾರ್ಮಿಕ ಭಾವನೆ ಮತ್ತು ಆತ್ಮಶುದ್ಧಿ ಉಂಟುಮಾಡಲಿವೆ ಎಂದರು.
ಕಾರ್ಯಕ್ರಮದಲ್ಲಿ ವಿಷ್ಣು ತತ್ತ್ವದ ಮಹತ್ವ, ಭಕ್ತಿಮಾರ್ಗ, ಧರ್ಮಾಚರಣೆ ಹಾಗೂ ಸನಾತನ ಸಂಸ್ಕ್ರತಿ ಮೌಲ್ಯಗಳ ಕುರಿತು ಧಾರ್ಮಿಕ ಪ್ರವಚನಗಳು ನಡೆಯಲಿದ್ದು, ಸಮಾಜದ ಹಿರಿಯರು, ಧರ್ಮಗುರು ಹಾಗೂ ಪಂಡಿತರು ಭಾಗವಹಿಸಲಿದ್ದಾರೆ. ಭಕ್ತಾದಿಗಳಲ್ಲಿ ಧಾರ್ಮಿಕ ಜಾಗೃತಿ ಮೂಡಿಸುವ ಜೊತೆಗೆ ಯುವ ಪೀಳಿಗೆಗೆ ಸಂಸ್ಕಾರಗಳ ಮಹತ್ವ ತಿಳಿಸುವುದು ಈ ಸಮಾವೇಶದ ಪ್ರಮುಖ ಉದ್ದೇಶವಾಗಿದೆ ಎಂದರು.
ಸಮಾಜದ ಪದಾಧಿಕಾರಿಗಳು, ಕಾರ್ಯಕರ್ತರು ಹಾಗೂ ಸಮಾಜದ ಗಣ್ಯರು ಸಮಾವೇಶದ ಯಶಸ್ಸಿಗೆ ಶ್ರಮಿಸುತ್ತಿದ್ದು, ಜಿಲ್ಲೆಯ ವಿವಿಧ ಭಾಗಗಳಿಂದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಎಲ್ಲಾ ಭಕ್ತಾದಿಗಳು ಕುಟುಂಬ ಸಮೇತವಾಗಿ ಆಗಮಿಸಿ ಸಮಾವೇಶದ ಯಶಸ್ಸಿಗೆ ಸಹಕರಿಸಬೇಕೆಂದು ಮನವಿ ಮಾಡಿದರು.ಸುದ್ದಿಗೋಷ್ಠಿಯಲ್ಲಿ ವೆಂಕಟೇಶಮೂರ್ತಿ, ಅಶ್ವಿನಿ, ರಮೇಶ್, ಸುಧೀಂದ್ರ ಇದ್ದರು.
A grand religious program called Vishnu Tattva Conference 2025 has been organized by the District Brahmin Society with the aim of enhancing religious spirit and thought.










