ಅರಸೀಕೆರೆ: ಪೋಷಕರು ತಮ್ಮ ಮಕ್ಕಳ ಭವಿಷ್ಯದ ಬಗ್ಗೆ ಸುಂದರ ಕನಸು ಕಾಣುವುದು ತಪ್ಪಲ್ಲ, ಅದಕ್ಕೆ ಪೂರಕವಾದ ವಾತಾವರಣ ನಿರ್ಮಿಸಿ ಕೊಡುವುದು ಜವಾಬ್ದಾರಿ ಎಂದು ಹಾಸನ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಶ್ರೀ ಶಂಭುನಾಥ ಸ್ವಾಮೀಜಿ ಹೇಳಿದರು.
ನಗರದ ಆದಿಚುಂಚನಗಿರಿ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ, ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಹಮ್ಮಿಕೊಂಡಿದ್ದ ಸ್ವಾಗತ ಸಮಾರಂಭದಲ್ಲಿ ಪಾಲ್ಗೊಂಡು ಸ್ವಾಮೀಜಿ ಆಶೀರ್ವಚನ ನೀಡಿದರು.
ಸ್ಪರ್ಧಾತ್ಮಕ ಯುಗದಲ್ಲಿ ನಾವೆಲ್ಲ ಸಾಗುತ್ತಿದ್ದೇವೆ, ಅದಕ್ಕೆ ವಿದ್ಯಾರ್ಥಿಗಳು ಹೊರತಾಗಿಲ್ಲ, ಸಿಇಟಿ/ನೀಟ್/ಜೆಇಇ ಇತ್ಯಾದಿ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ನಾವು ನಮ್ಮ ಮಕ್ಕಳನ್ನ ಸಿದ್ಧಪಡಿಸಬೇಕಾಗಿದೆ, ಇಂತಹ ಸಂದರ್ಭಗಳಲ್ಲಿ ಪೋಷಕರು ತೆಗೆದುಕೊಳ್ಳುವ ನಿರ್ಧಾರಗಳು ವಿದ್ಯಾರ್ಥಿಗಳ ಭವಿಷ್ಯದ ದಿಕ್ಸೂಚಿಯಾಗಿರುತ್ತದೆ ಎಂದು ಕಿವಿ ಮಾತು ಹೇಳಿದರು.
ಭೈರವೈಕ್ಯ ಡಾ.ಬಾಲಗಂಗಾಧರನಾಥ ಸ್ವಾಮೀಜಿಗಳ ಸಂಕಲ್ಪ ಹಾಗೂ ಅವರ ದೂರ ದೃಷ್ಟಿಕೋನ ಇಂದು ರಾಜ್ಯದ ಲಕ್ಷಾಂತರ ವಿದ್ಯಾರ್ಥಿಗಳ ಬದುಕಿಗೆ ಬೆಳಕಾಗಿದೆ. ಆದಿಚುಂಚನಗಿರಿ ಮಠದ ಆಶ್ರಯದಲ್ಲಿ ನಡೆಯುತ್ತಿರುವ ಶಾಲಾ ಕಾಲೇಜುಗಳು ಪ್ರತಿಯೊಂದು ಮಗುವಿನ ಭವಿಷ್ಯಕ್ಕೆ ಭದ್ರ ಬುನಾದಿ ನಿರ್ಮಿಸಿ ಕೊಡುತ್ತಿದೆ ಇದೇ ಆದಿಯಲ್ಲಿ ಅರಸೀಕೆರೆ ಆದಿಚುಂಚನಗಿರಿ ಪದವಿ ಪೂರ್ವ ಕಾಲೇಜು ಸಾಗುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಚಿಕ್ಕಮಂಗಳೂರಿನ ಆದಿಚುಂಚನಗಿರಿ ಇಂಜಿನಿಯರಿAಗ್ ಕಾಲೇಜಿನ ಪ್ರಾಂಶುಪಾಲ ಡಾ.ಸಿ.ಟಿ ಜಯದೇವ್, ಮಾತನಾಡಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಸವಾಲ್ ಎಂದು ಪರಿಗಣಿಸದೆ ಸಹಜವಾಗಿ ಎದುರಿಸುವ ಮನಸ್ಥಿತಿಯನ್ನು ಮೊದಲು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು. ಅದಕ್ಕೆ ಪೂರಕವಾದ ವಾತಾವರಣ ನಿರ್ಮಿಸಿಕೊಡುವ ಜವಾಬ್ದಾರಿ ಪೋಷಕರು ಸಮಾಜ ಹಾಗೂ ತಾವು ವಿದ್ಯಾಭ್ಯಾಸ ಮಾಡುವ ಶಿಕ್ಷಣ ಸಂಸ್ಥೆಯದಾಗಿದೆ.
ಈ ನಿಟ್ಟಿನಲ್ಲಿ ಅರಸೀಕೆರೆ ಆದಿಚುಂಚನಗಿರಿ ಕಾಲೇಜು ಶಂಭುನಾಥ ಸ್ವಾಮೀಜಿ ಅವರ ಮಾರ್ಗದರ್ಶನದಲ್ಲಿ ಅನುಭವಿ ಬೋಧಕ, ಬೋಧಕೇತರ ಸಿಬ್ಬಂದಿಗಳ ಪರಿಶ್ರಮ ಫಲವಾಗಿ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಇಲ್ಲಿನ ಕಾಲೇಜಿನ ವಿದ್ಯಾರ್ಥಿಗಳು ಗಮನಾರ್ಹ ಸಾಧನೆ ತೋರುವ ಮೂಲಕ ತಮ್ಮ ಪೋಷಕರ ಕನಸನ್ನು ನನಸು ಮಾಡುವುದರ ಜೊತೆಗೆ ಕಾಲೇಜಿನ ಅಧ್ಯಾಪಕರ ವೃಂದದ ಶ್ರಮವನ್ನು ಸಾರ್ಥಕ ಗೊಳಿಸುತ್ತಿರುವುದು ಸಂತಸದ ವಿಷಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.










