15.2 C
Munich
Home News ಹಾಸನ: ನಗರದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಉದ್ಘಾಟನೆಗೆ ಸಿಐಟಿಯು ಗಡುವು

ಹಾಸನ: ನಗರದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಉದ್ಘಾಟನೆಗೆ ಸಿಐಟಿಯು ಗಡುವು

ಹಾಸನ: ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಸಬಲೀಕರಣಕ್ಕೆ ಜನಾರೋಗ್ಯಕ್ಕಾಗಿ,  ಆಗಷ್ಟ ೧೫ ರಿಂದ ಜನಾಂದೋಲನ, ಸಾಮೂಹಿಕ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದ ಎಂದು ಸಿಐಟಿಯು ಜಿಲ್ಲಾಧ್ಯಕ್ಷ ಧರ್ಮೇಶ್ ತಿಳಿಸಿದರು. ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಭಾರತೀಯ ಸಾರ್ವಜನಿಕ ಆರೋಗ್ಯ ಮಾನದಂಡಗಳಿಗೆ (ಐ.ಪಿ.ಎಚ್.ಎಸ್.) ಅನುಗುಣವಾಗಿ ಸೌಲಭ್ಯ ನೀಡಿ ಉನ್ನತೀಕರಿಸಿ ಸಬಲೀಕರಿಸುವಂತೆ ಆಗ್ರಹಿಸಿ ಜಿಲ್ಲಾ ಜನಪರ ಚಳುವಳಿಗಳ ಒಕ್ಕೂಟದ ನೇತೃತ್ವದಲ್ಲಿ ಜನಾರೋಗ್ಯಕ್ಕಾಗಿ ಜನಾಂದೋಲನ ಆರಂಭಿಸಲಾಗಿದೆ ಎಂದರು.

ಇದರ ಭಾಗವಾಗಿ ಆ.೧೫ರ  ದಿನದಂದ ಹಿಮ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕಟ್ಟದ ಮುಂದೆ ಸಾಮೂಹಿಕ ಧರಣಿ ಸತ್ಯಾಗ್ರಹ ನಡೆಸಲು ತೀರ್ಮಾನಿಸಲಾಗಿದೆ ಎಂದರು.ಆ.೧೪ ರಂದು ಜಿಲ್ಲೆಯ ಜನರ ಪರವಾಗಿ ಜನಾರೋಗ್ಯದ ಹಕ್ಕೊತ್ತಾಯಗಳನ್ನು ಜಿಲ್ಲಾಧಿಕಾರಿ ಅವರಿಗೆ ಸಲ್ಲಿಸಲಾಗುವುದು. ಆ.೧೫ ರಂದು ನಡೆಯುವ ಜನಾರೋಗ್ಯದ   ಸಾಮೂಹಿಕ ಧರಣಿ ಸತ್ಯಾಗ್ರಹ ನಡೆಸಲಾಗುವುದು. ಜನಾರೋಗ್ಯದ ಪರಿಸ್ಥಿತಿ ತೀವ್ರವಾಗಿ ಉಲ್ಬಣಗೊಂಡಿದೆ. ಎಲ್ಲಾ ವಯಸ್ಸಿನವರಲ್ಲಿ ಹೃದಯಾಘಾತ, ಹೃದಯ ಸ್ತಂಭನ ಮತ್ತು ಹಠಾತ್ ಮರಣಗಳ ಸಂಖ್ಯೆ ಹೆಚ್ಚಾಗುತ್ತಿರುವುದು, ಇಂದಿನ ಜನಾರೋಗ್ಯ ತುರ್ತುಸ್ಥಿತಿಯಲ್ಲಿರುವುದರ ಮುನ್ಸೂಚನೆಯಾಗಿದೆ ಎಂದರು. ರಕ್ತದೊತ್ತಡ, ಮಧುಮೇಹ, ಥೈರಾಯ್ಡ್, ಸ್ಥೂಲಕಾಯತೆ ಮುಂತಾದ ದೈಹಿಕ ವ್ಯತ್ಯಾಸಗಳು ತೀವ್ರವಾಗಿ ಮತ್ತು ಆತಂಕಕಾರಿ ಮಟ್ಟದಲ್ಲಿ ಹೆಚ್ಚಾಗುತ್ತಿವೆ. ಇದರಿಂದಾಗಿ ಹೃದ್ರೋಗ, ಪಾರ್ಶ್ವವಾಯು, ಕಿಡ್ನಿ ಸಮಸ್ಯೆ, ಮೆದುಳು ಮತ್ತು ನರರೋಗ, ಕ್ಯಾನ್ಸರ್ ಮತ್ತಿತರೆ ಮಾರಣಾಂತಿಕ ಕಾಯಿಲೆಗಳು ಎಲ್ಲಾ ವಯೋಮಾನದ ಜನರಲ್ಲಿ ಹೆಚ್ಚಾಗುತ್ತಿವೆ. ಜಿಲ್ಲೆಯ ಜನಾರೋಗ್ಯದ ಸ್ಥಿತಿ ಹಾಗೂ ಜಿಲ್ಲೆಯ ಸಾರ್ವಜನಿಕ ಆರೋಗ್ಯ ವ್ಯವಸ್ಥೆ ನಡುವಿನ ಅಂತರಗಳು ಹೆಚ್ಚಾಗಿವೆ ಎಂದರು

.
ಹೀಗಾಗಿ ಹಿಮ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಮಿಕ್ಕ ಆಸ್ಪತ್ರೆಯ ಕಟ್ಟಡದ ತುರ್ತು ಕಾಮಗಾರಿ, ವೈದ್ಯಕೀಯ ಯಂತ್ರೋಪಕರಣ, ತಜ್ಞ ವೈದ್ಯರು, ವೈದ್ಯಕೀಯ ಮತ್ತು ವೈದ್ಯಕೀಯೇತರ ಸಿಬ್ಬಂದಿಗಳ ನೇಮಕಾತಿಗಾಗಿ ಸದ್ಯದ ಅಂದಾಜಿನ ಪ್ರಕಾರ ಕನಿಷ್ಠ ೬೦ ಕೋಟಿ ರೂ.ಅನುದಾನದ ಅಗತ್ಯವಿದೆ. ಹೃದ್ರೋಗ ಶಸ್ತçಚಿಕಿತ್ಸೆ, ನರರೋಗ, ನರರೋಗ ಶಸ್ತçಚಿಕಿತ್ಸೆ, ಮೂತ್ರಪಿಂಡ, ಗ್ಯಾಸ್ಟೊ ಎಂಟಾಲಜಿ, ಕ್ಯಾನ್ಸರ್, ಪ್ಲಾಸ್ಟಿಕ್ ಸರ್ಜರಿ ಸೇರಿದಂತೆ ಮಾರಣಾಂತಿಕ ರೋಗ ತಪಾಸಣೆ ಹತ್ತು ವಿಶೇಷ ವಿಭಾಗಗಳ ಗಂಭೀರ ಸ್ವರೂಪದ ಆರೋಗ್ಯದ ಸಮಸ್ಯೆಗಳಿಗೆ ಚಿಕಿತ್ಸೆ ಒದಗಿಸಲು ಇಲ್ಲಿ ಸಾಧ್ಯತೆ ಇದ್ದು, ಇಲ್ಲಿ ರೋಗ ತಪಾಸಣೆ ಮತ್ತು ಚಿಕಿತ್ಸೆ ನೀಡಲು ವೈದ್ಯಕೀಯ ವಿಭಾಗಗಳು, ಕ್ಯಾಥ್‌ಲ್ಯಾಬ್, ಅತ್ಯಂತ ಸುಸಜ್ಜಿತವಾದ ಅತ್ಯುತ್ತಮ ಗುಣಮಟ್ಟದ ವೈದ್ಯಕೀಯ ಸೌಲಭ್ಯಗಳಿರುವ ಪ್ರತ್ಯೇಕ ಶಸ್ತçಚಿಕಿತ್ಸಾ ಘಟಕಗಳನ್ನು ಕೂಡಲೇ ಪ್ರಾರಂಭಿಸಬೇಕು. ನುರಿತ ತಜ್ಞ ವೈದ್ಯರು, ವೈದ್ಯರು, ವೈದ್ಯಕೀಯ ಮತ್ತು ವೈದ್ಯಕೀಯೇತರ ಸಿಬ್ಬಂದಿಗಳನ್ನು ನೇಮಕ ಮಾಡಿ, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಕಾರ್ಯಾರಂಭಕ್ಕೆ ಅಗತ್ಯ ಅನುಕೂಲಗಳನ್ನು ತುರ್ತಾಗಿ ಒದಗಿಸಿ, ಕೂಡಲೇ ಸರ್ಕಾರವು ಅಗತ್ಯವಿರುವ ಅನುದಾನ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.

ಹಾಗೆಯೇ ಜಿಲ್ಲೆಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಸಮುದಾಯ ಆರೋಗ್ಯ ಕೇಂದ್ರಗಳ ಸಂಖ್ಯೆ ಹೆಚ್ಚಿಸಬೇಕು, ಎಲ್ಲ ವೈದ್ಯಕೀಯ ಸೌಲಭ್ಯ ಉಳ್ಳ ಸಂಚಾರಿ ವೈದ್ಯಕೀಯ ವಾಹನ ವ್ಯವಸ್ಥೆ ಏರ್ಪಡಿಸಬೇಕು ಹಾಗೂ ಎಲ್ಲಾ ಶಾಲಾ ಕಾಲೇಜುಗಳಲ್ಲಿ ಕ್ರೀಡೆ  ಚಟುವಟಿಕೆಗಳನ್ನು ಕಡ್ಡಾಯಗೊಳಿಸಿ, ಪ್ರತಿ ವಿದ್ಯಾರ್ಥಿಗಳನ್ನು ಕಡ್ಡಾಯವಾಗಿ ಇದರಲ್ಲಿ ಪಾಲ್ಗೊಳಿಸಬೇಕು. ಜಿಲ್ಲೆಯಾದ್ಯಂತ ಹೆಚ್ಚುತ್ತಿರುವ ಮದ್ಯದ ಅಂಗಡಿ, ಬಾರ್ ಮತ್ತು ರೆಸ್ಟೋರೆಂಟ್‌ಗಳ ಮೇಲೆ ಕಡಿವಾಣ ಮತ್ತು ನಿಯಂತ್ರಣ ಹಾಕಬೇಕು ಹಾಗೂ ಇವುಗಳಿಗೆ ಹೊಸದಾಗಿ ಯಾವುದೇ ಪರವಾನಗಿ ನೀಡಬಾರದು.

ಮೇಲ್ಕಂಡ ಹಕ್ಕೊತ್ತಾಯಗಳನ್ನು ತುರ್ತಾಗಿ ಆದ್ಯತೆ ಮೇರೆಗೆ ಪರಿಗಣಿಸಿ ಈ ಬೇಡಿಕೆ ಈಡೇರುವವರೆಗೂ ಪ್ರತಿಭಟನೆ ಮುಂದುವರಿಯಲಿದೆ ಎಂದರು. ಸುದ್ದಿಗೋಷ್ಟಿಯಲ್ಲಿ ರೂಪ ಹಾಸನ, ಎಚ್.ಕೆ. ಸಂದೇಶ್, ಎಂ.ಜಿ.ಪೃಥ್ವಿ ಮೊದಲಾದವರಿದ್ದರು.

error: Content is protected !!