11.3 C
Munich
Home News ಕಚೇರಿಗೆ ಅಲೆದು ಸುಸ್ತಾದವರು ಜನ ಸಂಪರ್ಕ ಸಭೆಯಲ್ಲಿ ಅರ್ಜಿ ಸಲ್ಲಿಸಿ ಎಂದ ಎಸಿ ಶ್ರುತಿ

ಕಚೇರಿಗೆ ಅಲೆದು ಸುಸ್ತಾದವರು ಜನ ಸಂಪರ್ಕ ಸಭೆಯಲ್ಲಿ ಅರ್ಜಿ ಸಲ್ಲಿಸಿ ಎಂದ ಎಸಿ ಶ್ರುತಿ

ಆಲೂರು: ಸಾರ್ವಜನಿಕರು ತಮ್ಮ ಸಮಸ್ಯೆಗಳ ಪರಿಹಾರಕ್ಕಾಗಿ ಅಲೆದಾಡಿ ಪರಿಹಾರ ಸಿಗದೆ ತ್ವರಿತ ಪರಿಹಾರಕ್ಕಾಗಿ ಸರ್ಕಾರ ರೂಪಿಸಿರುವ ಜನಸ್ಪಂದನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸರ್ಕಾರದ ವಿವಿಧ ಇಲಾಖೆಗಳಿಗೆ  ಅಹವಾಲುಗಳಿದ್ದಲ್ಲಿ ಸಲ್ಲಿಸಿ ಪರಿಹಾರ ಕಂಡುಕೊಳ್ಳಬಹುದು ಎಂದು ಸಕಲೇಶಪುರ ಉಪವಿಭಾಗಾಧಿಕಾರಿ ಶೃತಿ ಹೇಳಿದರು.

ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಜನಸ್ಪಂದನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ರಾಜ್ಯ ಸರ್ಕಾರದ ನಿರ್ದೇಶನದಂತೆ ತಿಂಗಳಿಗೆ ಎರಡು ಬಾರಿ ಜನ ಸ್ಪಂದನ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಿದ್ದು, ತಾಲೂಕು ಮಟ್ಟದಲ್ಲಿ ಗ್ರಾಮೀಣ ಭಾಗದ ಸಮಸ್ಯೆಗಳನ್ನು ಪರಿಶೀಲಿಸಿ ಪರಿಹಾರ ನೀಡಲಾಗುವುದು. ಸಮಸ್ಯೆಗಳಿರುವ ಸಾರ್ವಜನಿಕರು ಈ ಜನಸ್ಪಂದನ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ತಮ್ಮ ಅಹವಾಲುಗಳನ್ನು ಸಲ್ಲಿಸಿ, ಅದರ ಸದುಪಯೋಗಪಡೆದುಕೊಳ್ಳಬೇಕು ಎಂದರು.

ತಹಸೀಲ್ದಾರ್ ಮಲ್ಲಿಕಾರ್ಜುನ್ ಮಾತನಾಡಿ, ಜನಸಾಮಾನ್ಯರು ತಮ್ಮ ಸಮಸ್ಯೆಗಳನ್ನು ಅಹವಾಲು ಮೂಲಕ ನೀಡಿದ ಅರ್ಜಿಗಳನ್ನು ಅಧಿಕಾರಿಗಳು ನಿರ್ಲಕ್ಷ ವಹಿಸದೆ ಶೀಘ್ರ ಸ್ಪಂದಿಸಬೇಕು. ಜನಸ್ಪಂದನ ಸಭೆಗಳು ಜನರಿಗೆ ಸಹಕಾರಿಯಾಗಬೇಕು. ಅಧಿಕಾರಿಗಳು ಸಮಸ್ಯೆ ಇತ್ಯರ್ಥಪಡಿಸಲು ಸೂಕ್ಷ ರೀತಿಯಲ್ಲಿ ಸ್ಪಂದಿಸಬೇಕು. ಸಾರ್ವಜನಿಕರ ಕೆಲವು ಸಣ್ಣ-ಪುಟ್ಟ ಸಮಸ್ಯೆಗಳಾದ ಖಾತೆ ಬದಲಾವಣೆ, ಹಕ್ಕುಪತ್ರ ವಿತರಣೆ, ಪ್ರಮಾಣ ಪತ್ರ ಸೇರಿದಂತೆ ಮತ್ತಿತರ ಸಮಸ್ಯೆಗಳಿಗೆ ಅಧಿಕಾರಿಗಳ ನೇತೃತ್ವದಲ್ಲಿ ತಕ್ಷಣವೇ ಸ್ಪಂದಿಸಬೇಕು ಎಂದ ಅವರು ಹಣಕಾಸಿನ ಅವಶ್ಯವಿರುವ ಸಮಸ್ಯೆಗಳನ್ನು ಸಂಬAಧಪಟ್ಟ ಇಲಾಖೆಯ ಗಮನಕ್ಕೆ ತಂದು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದಾಗ ಸರ್ಕಾರದ ಮಟ್ಟದಲ್ಲಿ ಅವುಗಳನ್ನು ಇತ್ಯರ್ಥಪಡಿಸಲಾಗುವುದು. ಜನರ ದೈನಂದಿನ ಸಮಸ್ಯೆಗಳ ಅರ್ಜಿಗಳನ್ನು ಸ್ಥಳೀಯ ಹಂತದಲ್ಲಿ ಪರಿಹರಿಸಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ಬಸ್ ಸೌಲಭ್ಯ, ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಶುಶೂಷಕಿ ನೇಮಿಸುವುದು, ವಿದ್ಯುತ್ ಸಂಪರ್ಕ ಕಲ್ಪಿಸುವುದು, ಅಪಾಯಕಾರಿ ಮರಗಳನ್ನು ತೆರವಿಗೆ, ರಸ್ತೆ ದುರಸ್ತಿ, ನೀರಿನ ಸೌಲಭ್ಯ, ಸರ್ಕಾರಿ ಸ್ಥಳ ಅತಿಕ್ರಮಣ, ಕಟ್ಟಡಗಳ ಸಕ್ರಮ, ಖಾತೆ ಬದಲಾವಣೆ, ೯೪ ಸಿ ಹಾಗು ಬಗರ್ ಹುಕಂನಲ್ಲಿ ಅರ್ಜಿ ಸಲ್ಲಿಸಿರುವ ರೈತರಿಗೆ ಹಕ್ಕುಪತ್ರ ಮತ್ತು ಸಾಗುವಳಿ ಚೀಟಿ ವಿತರಣೆ, ಸೇರಿದಂತೆ ಸುಮಾರು ೪೭ ಅಹವಾಲುಗಳು ಸಲ್ಲಿಕೆಯಾಗಿದ್ದವು.

ಸಭೆಯಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ. ನಿಸಾರ್ ಅಹಮದ್, ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣೇಗೌಡ, ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಸಹಾಯಕ ನಿರ್ದೇಶಕ ರಮೇಶ್, ಸಬ್ ಇನ್ಸ್ಪೆಕ್ಟರ್ ಪ್ರವೀಣ್ ಕುಮಾರ್ ಸೇರಿದಂತೆ ಮುಂತಾದವರು ಹಾಜರಿದ್ದರು.

error: Content is protected !!