ಬಂಡೆ ದೇವರಾಜ್ ಗ್ರೀನ್ ಗ್ರಾನೈಟ್ ಕ್ವಾರಿಯಲ್ಲಿ ದುರಂತ: ಸತ್ತವರೆಷ್ಟು? ಮೂಟೆಯಲ್ಲಿ ಕಾರ್ಮಿಕರ ಶವ ಸಾಗಿಸಿ ಪ್ರಕರಣ ಮುಚ್ಚಿ ಹಾಕಲು ಸರ್ಕಸ್?

One worker was killed and four others were seriously injured in a horrific accident at the Green Granite Quarry on Thursday.

ಹಾಸನ, ಜೂನ್ 06, 2025: ಹಾಸನ ತಾಲೂಕಿನ ಧೂಮಗೆರೆ ಗ್ರಾಮದ ನವ್ಯಶ್ರೀ ಮಿನರಲ್ಸ್‌ಗೆ ಸೇರಿದ ಗ್ರೀನ್ ಗ್ರಾನೈಟ್ ಕ್ವಾರಿಯಲ್ಲಿ ಗುರುವಾರ ನಡೆದ ಭೀಕರ ಅವಘಡದಲ್ಲಿ ಓರ್ವ ಕಾರ್ಮಿಕ ಸಾವನ್ನಪ್ಪಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಗ್ರಾನೈಟ್ ಕಲ್ಲು ಕತ್ತರಿಸುವ ವೈರ್ ಕಟ್ ಕಾರ್ಯಾಚರಣೆ ವೇಳೆ ಬಂಡೆ ಮತ್ತು ಮಣ್ಣು ಕುಸಿದು ಬಿದ್ದು ಈ ದುರ್ಘಟನೆ ಸಂಭವಿಸಿದೆ.

ಗಾಯಾಳುಗಳನ್ನು ಹಾಸನದ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಆದರೆ, ಮಣಿ ಎಂಬ ಕಾರ್ಮಿಕನನ್ನು ಚಿಕಿತ್ಸೆಗಾಗಿ ಬೆಂಗಳೂರಿಗೆ ಸಾಗಿಸುವಾಗ ದಾರಿಮಧ್ಯೆ ಮೃತಪಟ್ಟಿದ್ದಾನೆ. ಈ ಘಟನೆಯ ಬಗ್ಗೆ ಸ್ಥಳೀಯರಲ್ಲಿ ಗೊಂದಲ ಉಂಟಾಗಿದ್ದು, ನಾಲ್ವರು ಕಾರ್ಮಿಕರು ಸಾವನ್ನಪ್ಪಿದ್ದಾರೆ ಎಂಬ ವದಂತಿಯೂ ಹಬ್ಬಿತ್ತು.

ಆದರೆ, ಪೊಲೀಸರು ಒಬ್ಬರ ಸಾವು ಮತ್ತು ನಾಲ್ವರ ಗಾಯಾಳಿತ ಘಟನೆಯನ್ನು ದೃಢಪಡಿಸಿದ್ದಾರೆ.ಕ್ವಾರಿಯ ಮಾಲೀಕ ದೇವರಾಜ್, ಅವರ ಪುತ್ರ ಅರ್ಜುನ್ ಮತ್ತು ಕ್ವಾರಿ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಪ್ರಕಾಶ್ ಎಂಬ ಮೂವರನ್ನು ಹಾಸನದ ಶಾಂತಿಗ್ರಾಮ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಕಾರ್ಮಿಕನ ಸಾವಿನ ವಿಷಯವನ್ನು ಮುಚ್ಚಿಡಲು ಪ್ರಯತ್ನಿಸಿದ ಆರೋಪದ ಮೇಲೆ ಕ್ವಾರಿ ಮಾಲೀಕ ಅರ್ಜುನ್ ಕಾರ್ಮಿಕನ ಶವವನ್ನು ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲಕ್ಕೆ ರಹಸ್ಯವಾಗಿ ಸಾಗಿಸಿದ್ದ ಎನ್ನಲಾಗಿದೆ. ಈ ಬಗ್ಗೆ ಮಾಹಿತಿ ಪಡೆಯಲು ಶಾಂತಿಗ್ರಾಮ ಪೊಲೀಸರು ಕೊಳ್ಳೆಗಾಲಕ್ಕೆ ತೆರಳಿದ್ದಾರೆ.

ಘಟನೆಯ ಸುದ್ದಿ ತಿಳಿಯುತ್ತಿದ್ದಂತೆ ಹಾಸನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಮೊಹಮ್ಮದ್ ಸುಜಿತಾ ಮತ್ತು ಜಿಲ್ಲಾಧಿಕಾರಿ (ಡಿಸಿ) ಸತ್ಯಭಾಮ ಅವರು ಮಧ್ಯರಾತ್ರಿಯೇ ಕ್ವಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆಯ ಕುರಿತು ತನಿಖೆ ಆರಂಭವಾಗಿದ್ದು, ಕ್ವಾರಿಯ ಸುರಕ್ಷತಾ ಕ್ರಮಗಳು ಮತ್ತು ಕಾರ್ಮಿಕರ ಸುರಕ್ಷತೆಗೆ ಸಂಬಂಧಿಸಿದಂತೆ ಕಾನೂನು ಕ್ರಮಕ್ಕೆ ಪೊಲೀಸರು ಮುಂದಾಗಿದ್ದಾರೆ.

ಮಧ್ಯರಾತ್ರಿ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದ ಜಿಲ್ಲಾಧಿಕಾರಿ ಸಿ.ಸತ್ಯಭಾಮ

ಕ್ವಾರಿ ಮಾಲಿಕರ ನಿರ್ಲಕ್ಷ್ಯದಿಂದಾಗಿ ಈ ದುರಂತ ಸಂಭವಿಸಿರುವ ಬಗ್ಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ತನಿಖೆಯಿಂದ ಹೆಚ್ಚಿನ ವಿವರಗಳು ಬಹಿರಂಗವಾಗುವ ನಿರೀಕ್ಷೆಯಿದೆ.