ಹೊಲದಲ್ಲಿ ಕೆಲಸ ಮಾಡುತ್ತಿದ್ದ ರೈತನಿಗೆ ಕಚ್ಚಿದ ಹಾವು: ಸಕಾಲಕ್ಕೆ ಚಿಕಿತ್ಸೆ ದೊರೆಯದೆ ಸಾವು

ಹಾಸನ: ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ರೈತರೊಬ್ಬರು ಹಾವು ಕಚ್ಚಿ ಮೃತಪಟ್ಟಿರುವ ಘಟನೆ ತಾಲ್ಲೂಕಿನ ಜೋಡಿಮಲ್ಲಪನಹಳ್ಳಿ ಗ್ರಾಮದಲ್ಲಿ ಭಾನುವಾರ ನಡೆದಿದೆ.

ಗ್ರಾಮದ ಜವರೇಗೌಡ (64) ಮೃತರು. ಮಧ್ಯಾಹ್ನ 3 ಗಂಟೆ ಸಮಯದಲ್ಲಿ ತಮ ಜಮೀನಿನಲ್ಲಿ ಮೆಕ್ಕೆಜೋಳ ಮುರಿಯುತ್ತಿದ್ದಾಗ ಕಾಲಿಗೆ ಹಾವು ಕಚ್ಚಿದೆ. ತಕ್ಷಣವೇ ಜವರೇಗೌಡ ಅವರು ಹಾವು ಕಚ್ಚಿದ ಸ್ಥಳದ ಮೇಲ್ಭಾಗ ಟವೆಲ್‌ನಿಂದ ಕಟ್ಟಿಕೊಂಡು ಮನೆಗೆ ಬರುತ್ತಿದ್ದಾಗ ಅಸ್ವಸ್ಥಗೊಂಡು ದಾರಿಯಲ್ಲೇ ಬಿದ್ದಿದ್ದರು.

ಮೃತಪಟ್ಟ ಜವರೇಗೌಡ

ಸಕಾಲಕ್ಕೆ ಸಿಗದ ಚಿಕಿತ್ಸೆ:

ಪಕ್ಕದ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಶ್ರೀನಿವಾಸ್‌‍ ಎಂಬುವವರು ಜವರೇಗೌಡರ ಹತ್ತಿರ ಬಂದು ಪರಿಶೀಲಿಸಿದಾಗ ಹಾವು ಕಚ್ಚಿದ್ದು ಗೊತ್ತಾಗಿ ಕೂಡಲೇ ಮನೆಯವರಿಗೆ ವಿಷಯ ತಿಳಿಸಿ ಮೊಸಳೆಹೊಸಹಳ್ಳಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಅಲ್ಲಿ ವೈದ್ಯರು ಇಲ್ಲದ್ದರಿಂದ ಆಂಬ್ಯುಲೆನ್ಸ್ ನಲ್ಲಿ ಹಿಮ್ಸ್ ಗೆ ಕರೆತರಲಾಯಿತಾದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.

ಮೃತ ಜವರೇಗೌಡ ಅವರಿಗೆ ಪುತ್ರ ಹಾಗು ಪುತ್ರಿ ಇದ್ದಾರೆ. ಗೊರೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.