ಹಾಸನ, ಮೇ 02: ಸಕಲೇಶಪುರ ತಾಲ್ಲೂಕಿನ ವಳಲಹಳ್ಳಿ ಬಳಿ ತಡರಾತ್ರಿ ಟಾಟಾ ಏಸ್ ವಾಹನದಲ್ಲಿ ಹತ್ತಕ್ಕೂ ಹೆಚ್ಚು ಜಾನುವಾರುಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಘಟನೆ ನಡೆದಿದೆ. ಈ ವೇಳೆ ಗೋವುಗಳನ್ನು ರಕ್ಷಿಸಲು ಮುಂದಾದ ಹಿಂದೂಪರ ಸಂಘಟನೆ ಕಾರ್ಯಕರ್ತರು ವಾಹನವನ್ನು ಅಡ್ಡಗಟ್ಟಲು ಯತ್ನಿಸಿದಾಗ, ಚಾಲಕ ವೇಗವಾಗಿ ವಾಹನ ಚಲಾಯಿಸಿ ಕಾರ್ಯಕರ್ತರಿಗೆ ಡಿಕ್ಕಿ ಹೊಡೆಯಲು ಪ್ರಯತ್ನಿಸಿದ್ದಾನೆ.
ನಂತರ ಚಾಲಕ ವಾಹನವನ್ನು ನದಿ ದಡದಲ್ಲಿ ನಿಲ್ಲಿಸಿ ಪರಾರಿಯಾಗಿದ್ದಾನೆ. ಹಿಂದೂಪರ ಸಂಘಟನೆ ಕಾರ್ಯಕರ್ತರು ಮುಂಜಾನೆವರೆಗೂ ವಾಹನವನ್ನು ಹುಡುಕಾಡಿ, ಹತ್ತಕ್ಕೂ ಹೆಚ್ಚು ಜಾನುವಾರುಗಳನ್ನು ರಕ್ಷಿಸಿದ್ದಾರೆ. ಆದರೆ, ಉಸಿರಾಡಲು ಸಾಧ್ಯವಾಗದೆ ಒಂದು ಜಾನುವಾರು ಮೃತಪಟ್ಟಿದೆ.
ಯಸಳೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಈ ಘಟನೆಯ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಕಲೇಶಪುರ ತಾಲ್ಲೂಕಿನಲ್ಲಿ ಅಕ್ರಮ ಗೋ ಸಾಗಾಣೆ ಎಗ್ಗಿಲ್ಲದೆ ನಡೆಯುತ್ತಿದ್ದು, ಪೊಲೀಸ್ ಇಲಾಖೆ ಕಣ್ಮುಚ್ಚಿ ಕುಳಿತಿದೆ ಎಂದು ಹಿಂದೂಪರ ಸಂಘಟನೆ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.










