ಹಾಸನ: ಅಧಿಕಾರಿಗಳು ಎಲ್ಲೆ ಮೀರಿ ವರ್ತಿಸಲು ಸರ್ಕಾರದಿಂದಲೇ ಪ್ರೋತ್ಸಾಹ: ಕೇಂದ್ರ ಸಚಿವ HDK ವಾಗ್ದಾಳಿ

"ನಾನು ಚಾಟ್‌ನಲ್ಲಿರುವ ಸತ್ಯಾಸತ್ಯತೆ ತನಿಖೆ ಮಾಡಿ ಎಂದಿದ್ದೇನೆಯೇ ಹೊರತು ಯಾರ ಮೇಲೂ ಬೊಟ್ಟು ಮಾಡಿಲ್ಲ. ಪಾಲುದಾರರಲ್ಲದಿದ್ದರೆ ಭಯವೇಕೆ? ಸಿಎಂ ಈಗಾಗಲೇ ಕ್ಲೀನ್ ಚಿಟ್ ಕೊಟ್ಟ ಮೇಲೆ ಈ ತನಿಖೆಯಲ್ಲಿ ಏನೂ ಆಗಲ್ಲ!"

  • ಹಾಸನ ಡಿಸಿ ಕೆ.ಎಸ್. ಲತಾಕುಮಾರಿ ಪಿಎ ಶಶಿಕಿರಣ್ ಚಾಟ್ ಪ್ರಕರಣದ ತನಿಖೆ ಕುರಿತು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಮಾವಿನಕೆರೆಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಸಿಎಂ ಕ್ಲೀನ್ ಚಿಟ್ ವಿರುದ್ಧ ಆಕ್ರೋಶ.

ಹಾಸನ(kannadapost.com): ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಅವರ ಆಪ್ತ ಸಹಾಯಕ (PA) ಶಶಿಕಿರಣ್ ಅವರದ್ದೆನ್ನಲಾದ ವಿವಾದಾತ್ಮಕ ವಾಟ್ಸ್ ಆ್ಯಪ್ ಚಾಟ್ ಪ್ರಕರಣದ ತನಿಖೆ ಕುರಿತಂತೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ರಾಜ್ಯ ಸರ್ಕಾರದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

“ಮುಖ್ಯಮಂತ್ರಿಗಳೇ ಅಧಿಕಾರಿಯನ್ನು ಪಕ್ಕದಲ್ಲಿ ಕೂರಿಸಿಕೊಂಡು ಕ್ಲೀನ್ ಚಿಟ್ ಕೊಟ್ಟ ಮೇಲೆ ಇನ್ನು ಯಾವ ರೀತಿ ತನಿಖೆ ನಡೆಯಲು ಸಾಧ್ಯ?” ಎಂದು ಅವರು ಪ್ರಶ್ನಿಸಿದ್ದಾರೆ.

​ಹೊಳೆನರಸೀಪುರ ತಾಲ್ಲೂಕಿನ ಮಾವಿನಕೆರೆಯಲ್ಲಿ ಶ್ರೀ ರಂಗನಾಥಸ್ವಾಮಿ ಸನ್ನಿಧಾನದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಚಾಟ್ ಪ್ರಕರಣ ಹಾಗೂ ಅಧಿಕಾರಿಗಳ ನಡವಳಿಕೆ ಕುರಿತು ಮಹತ್ವದ ಹೇಳಿಕೆ ನೀಡಿದ್ದಾರೆ.

​ನಾನು ಯಾರ ಹೆಸರನ್ನೂ ಹೇಳಿಲ್ಲ, ತನಿಖೆ ಕೇಳುವುದು ತಪ್ಪೇ?

ದೇವರ ಮೇಲೆ ಆಣೆ ಮಾಡುವ ವಿಚಾರ ಹಾಗೂ ಸಾಮಾಜಿಕ ಜಾಲತಾಣಗಳ ಸ್ಟೇಟಸ್ ಕುರಿತು ಪ್ರತಿಕ್ರಿಯಿಸಿದ ಎಚ್‌ಡಿಕೆ, “ನಾನು ಎಲ್ಲಾದರೂ ಅವರು ದುಡ್ಡು ತಗೊಂಡಿದ್ದಾರೆ ಎಂದು ಹೇಳಿದ್ದೀನಾ? ಅಥವಾ ಯಾರ ಮೇಲಾದರೂ ಬೊಟ್ಟು ಮಾಡಿ ತೋರಿಸಿದ್ದೀನಾ? ನನ್ನ ಮುಂದೆ ಈ ವಿಷಯ ಬಂದಾಗ ಚಾಟ್‌ನಲ್ಲಿರುವ ಸತ್ಯಾಸತ್ಯತೆಯನ್ನು ತನಿಖೆ ಮಾಡಿ ಎಂದಷ್ಟೇ ಹೇಳಿದ್ದೇನೆ. ತನಿಖೆ ಮಾಡಿ ಎಂದು ಆಗ್ರಹಿಸುವುದು ತಪ್ಪಾ? ಚಾಟ್‌ನಲ್ಲಿ ಯಾರು ಭಾಗಿಯಾಗಿದ್ದಾರೋ ಅವರ ಹೆಸರುಗಳೇ ಅಲ್ಲಿವೆ. ಆ ಪ್ರಕರಣದಲ್ಲಿ ಅವರ ಪಾತ್ರ ಇಲ್ಲದಿದ್ದ ಮೇಲೆ ಭಯ ಪಡುವುದು ಏತಕ್ಕೆ?” ಎಂದು ತಿರುಗೇಟು ನೀಡಿದರು.

​ಅಧಿಕಾರಿಗಳ ಅತಿಯಾದ ವರ್ತನೆಗೆ ಸರ್ಕಾರದ ಪ್ರೋತ್ಸಾಹ

ಸರ್ಕಾರಿ ಅಧಿಕಾರಿಗಳ ನಡವಳಿಕೆ ವಿರುದ್ಧ ಕಿಡಿಕಾರಿದ ಕೇಂದ್ರ ಸಚಿವರು, “ಅಧಿಕಾರಿಗಳು ಹೇಗೆ ನಡೆದುಕೊಳ್ಳಬೇಕು ಎಂಬುದಕ್ಕೆ ಸೇವಾ ನಿಯಮಗಳಿವೆ. ಆದರೆ ಈ ಸರ್ಕಾರದಲ್ಲಿ ಅಧಿಕಾರಿಗಳು ಎಲ್ಲೆ ಮೀರಿ ವರ್ತಿಸಲು ಸ್ವತಃ ಸರ್ಕಾರವೇ ಪ್ರೋತ್ಸಾಹ ನೀಡುತ್ತಿದೆ. ಮುಖ್ಯಮಂತ್ರಿಗಳೇ ಆ ಅಧಿಕಾರಿಯನ್ನು ಅಕ್ಕಪಕ್ಕ ಕೂರಿಸಿಕೊಂಡು ಕ್ಲೀನ್ ಚಿಟ್ ಕೊಟ್ಟಿರುವುದನ್ನು ನಾನು ನೋಡಿದ್ದೇನೆ. ಇನ್ನು ಈ ಸರ್ಕಾರದಲ್ಲಿ ಯಾವುದೇ ನಿಷ್ಪಕ್ಷಪಾತ ತನಿಖೆ ನಡೆಯುವುದಿಲ್ಲ. ಅಧಿಕಾರಿಗಳ ಸ್ಟೇಟಸ್‌ಗಳಿಗೆಲ್ಲಾ ತಲೆ ಕೆಡಿಸಿಕೊಳ್ಳಬೇಡಿ” ಎಂದರು.

​ಕಾಲ ಬಂದಾಗ ದೇವರೇ ಉತ್ತರ ಕೊಡುತ್ತಾನೆ

“ಇವತ್ತು ರಂಗನಾಥಸ್ವಾಮಿ ಸನ್ನಿಧಾನದಲ್ಲಿ ಕುಳಿತು ಹೇಳುತ್ತಿದ್ದೇನೆ, ಈ ಸರ್ಕಾರದಲ್ಲಿ ಈ ಪ್ರಕರಣದ ತನಿಖೆಯಿಂದ ಏನೂ ಆಗುವುದಿಲ್ಲ. ಅದಕ್ಕೆಲ್ಲಾ ಕಾಲ ಬರಬೇಕು. ಕಾಲ ಬಂದಾಗ ಯಾವ ರೀತಿ ಬದಲಾವಣೆ ಆಗುತ್ತದೆ ಎಂಬುದನ್ನು ಕಾದು ನೋಡೋಣ. ಇಂತಹ ನಡವಳಿಕೆ ಇರುವವರಿಗೆ ಕಾಲ ಬಂದಾಗ ಆ ದೇವರೇ ತಕ್ಕ ಫಲ ಕೊಡುತ್ತಾನೆ” ಎಂದು ಎಚ್.ಡಿ. ಕುಮಾರಸ್ವಾಮಿ ಮಾರ್ಮಿಕವಾಗಿ ನುಡಿದರು.