ಹಾಸನ,ನ,14,2026 (kannadapost.com): ಹಾಸನ ತಾಲ್ಲೂಕಿನ ಶಾಂತಿಗ್ರಾಮ ಹೋಬಳಿಯ ಮೋಸಳೆಹೊಸಹಳ್ಳಿ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ–373ರಲ್ಲಿ ಫ್ಲೈಓವರ್ ಅಥವಾ ಗ್ರೇಡ್ ಸೆಪರೇಟರ್ ನಿರ್ಮಿಸುವ ಪ್ರಸ್ತಾವನೆಗೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿ–373ರ ಕಿ.ಮೀ. 74.250ರಲ್ಲಿ ಫ್ಲೈಓವರ್ ನಿರ್ಮಿಸುವಂತೆ ಹಾಸನ ಸಂಸದ ಶ್ರೇಯಸ್ ಎಂ. ಪಟೇಲ್ ಅವರು ಸಲ್ಲಿಸಿದ್ದ ಮನವಿಗೆ ಪ್ರತಿಕ್ರಿಯಿಸಿರುವ ಸಚಿವರು, ಸ್ಥಳದಲ್ಲಿ ತಕ್ಷಣ ತಾಂತ್ರಿಕ ಅಧ್ಯಯನ ನಡೆಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
2026ರ ಅಕ್ಟೋಬರ್ 28ರಂದು ಬರೆದಿರುವ ಪತ್ರದಲ್ಲಿ, ಈ ಪ್ರಸ್ತಾವನೆಯನ್ನು 2026–27ನೇ ಸಾಲಿನ ವಾರ್ಷಿಕ ಯೋಜನೆಯ ಪರಿಗಣನೆಗೆ ಅಂತಿಮಗೊಳಿಸುವಂತೆ ಸೂಚಿಸಲಾಗಿದೆ. ಅಲ್ಲದೆ, ಕಾಮಗಾರಿಯ ಟೆಂಡರ್ ಪ್ರಕ್ರಿಯೆ ಹಾಗೂ ಅನುಷ್ಠಾನಕ್ಕೆ ಶೀಘ್ರ ಕ್ರಮ ಕೈಗೊಳ್ಳುವುದಾಗಿ ಸಚಿವರು ಭರವಸೆ ನೀಡಿದ್ದಾರೆ.
ಅಪಘಾತದ ಹಿನ್ನೆಲೆ ರಸ್ತೆ ಸುರಕ್ಷತೆಗೆ ಒತ್ತು
ಮೋಸಳೆಹೊಸಹಳ್ಳಿ ಬಳಿ ಸಂಭವಿಸಿದ್ದ ಅಪಘಾತದಲ್ಲಿ ಜೀವಹಾನಿ ಹಾಗೂ ಹಲವರು ಗಾಯಗೊಂಡಿರುವ ಘಟನೆಯನ್ನು ಸಚಿವರು ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಮೃತರ ಕುಟುಂಬಗಳಿಗೆ ಸಂತಾಪ ಸೂಚಿಸಿರುವ ಅವರು, ರಸ್ತೆ ಸುರಕ್ಷತೆಯ ದೃಷ್ಟಿಯಿಂದ ಈ ಸ್ಥಳದಲ್ಲಿ ಫ್ಲೈಓವರ್ ಅಥವಾ ಗ್ರೇಡ್ ಸೆಪರೇಟರ್ ನಿರ್ಮಿಸುವ ಪ್ರಸ್ತಾವನೆಯ ತಾಂತ್ರಿಕ ಪರಿಶೀಲನೆಗೆ ಆದ್ಯತೆ ನೀಡುವಂತೆ ತಿಳಿಸಿದ್ದಾರೆ.
ಸಂಸದ ಶ್ರೇಯಸ್ ಪಟೇಲ್ರಿಂದ ನಿರಂತರ ಅನುಸರಣೆ ಭರವಸೆ
ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ಸ್ಪಂದನೆಗೆ ಧನ್ಯವಾದ ತಿಳಿಸಿರುವ ಸಂಸದ ಶ್ರೇಯಸ್ ಎಂ. ಪಟೇಲ್, ಯೋಜನೆಯ ಪ್ರಸ್ತಾವನೆ ಮುಂದಿನ ಹಂತಗಳಿಗೆ ಸಾಗುವಂತೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ನಿರಂತರವಾಗಿ ಅನುಸರಣೆ ನಡೆಸುವುದಾಗಿ ತಿಳಿಸಿದ್ದಾರೆ.
ಮೋಸಳೆಹೊಸಹಳ್ಳಿ ಬಳಿ ಫ್ಲೈಓವರ್ ನಿರ್ಮಾಣಕ್ಕೆ ತಾಂತ್ರಿಕ ಅಧ್ಯಯನ ನಡೆಸುವಂತೆ ಕೇಂದ್ರ ಸಚಿವರು ಸೂಚಿಸಿರುವುದು ಈ ಭಾಗದ ವಾಹನ ಸವಾರರು ಹಾಗೂ ಸ್ಥಳೀಯರಲ್ಲಿ ನಿರೀಕ್ಷೆ ಮೂಡಿಸಿದೆ.
KannadaPost.com | ಹಾಸನದ ಸ್ಥಳೀಯ ಸುದ್ದಿಗಳಿಗಾಗಿ ನಮ್ಮೊಂದಿಗೆ ಇರಿ.












