ಹೆಲಿಕಾಪ್ಟರ್ ದುರಂತದಲ್ಲಿ ಬಾಚಿಹಳ್ಳಿ ಪ್ರತಾಪ್ ಗೌಡ ನಿಧನ: ಡೆಹ್ರಾಡೂನ್‌ಗೆ ತೆರಳಿ ಪಾರ್ಥಿವ ಶರೀರ ತವರಿಗೆ ತರಲು ಸಂಸದ ಶ್ರೇಯಸ್ ಪಟೇಲ್ ನೆರವು

​ಉತ್ತರಾಖಂಡದ ಜೋಶಿಮಠದಲ್ಲಿ ಸಂಭವಿಸಿದ ಹೆಲಿಕಾಪ್ಟರ್ ದುರಂತದಲ್ಲಿ ಸಕಲೇಶಪುರದ ಸಮಾಜಸೇವಕ ಬಾಚಿಹಳ್ಳಿ ಪ್ರತಾಪ್ ಗೌಡ ಸೇರಿ ಐವರ ದುರ್ಮರಣ. ​ಸುದ್ದಿ ತಿಳಿದ ತಕ್ಷಣವೇ ಸ್ಪಂದಿಸಿ, ಖುದ್ದು ಡೆಹ್ರಾಡೂನ್‌ಗೆ ತೆರಳಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಸಂಸದ ಶ್ರೇಯಸ್ ಎಂ. ಪಟೇಲ್. ​ಪಾರ್ಥಿವ ಶರೀರವನ್ನು ಗೌರವಪೂರ್ವಕವಾಗಿ ಕರ್ನಾಟಕಕ್ಕೆ ತರಲು ಸಂಸದರಿಂದ ಸಂಪೂರ್ಣ ವ್ಯವಸ್ಥೆ ಹಾಗೂ ಸಹಕಾರ.

ಹಾಸನ / ಡೆಹ್ರಾಡೂನ್ (kannadapost.com): ಉತ್ತರಾಖಂಡ ರಾಜ್ಯದ ಚಮೋಲಿ ಜಿಲ್ಲೆಯ ಜೋಶಿಮಠದಲ್ಲಿ ಸಂಭವಿಸಿದ ಭೀಕರ ಹೆಲಿಕಾಪ್ಟರ್ ದುರಂತದಲ್ಲಿ ಹಾಸನ ಜಿಲ್ಲೆ ಸಕಲೇಶಪುರದ ಖ್ಯಾತ ಸಮಾಜಸೇವಕ, ದಾನಿ ಬಾಚಿಹಳ್ಳಿ ಪ್ರತಾಪ್ ಗೌಡ ಸೇರಿದಂತೆ ಐವರು ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ.

ಮೃತರ ಪಾರ್ಥಿವ ಶರೀರವನ್ನು ಹುಟ್ಟೂರಿಗೆ ತರಲು ಹಾಸನ ಲೋಕಸಭಾ ಕ್ಷೇತ್ರದ ಸಂಸದ ಶ್ರೇಯಸ್ ಎಂ. ಪಟೇಲ್ ಅವರು ಖುದ್ದು ಮುಂಚೂಣಿಯಲ್ಲಿ ನಿಂತು ನೆರವಾಗಿದ್ದಾರೆ.

​ಖುದ್ದು ಡೆಹ್ರಾಡೂನ್‌ಗೆ ತೆರಳಿದ ಸಂಸದರು:

ದುರ್ಘಟನೆಯ ಸುದ್ದಿ ತಿಳಿಯುತ್ತಿದ್ದಂತೆಯೇ ತಕ್ಷಣ ಸ್ಪಂದಿಸಿದ ಸಂಸದ ಶ್ರೇಯಸ್ ಎಂ. ಪಟೇಲ್ ಅವರು, ಮೃತ ಪ್ರತಾಪ್ ಗೌಡ ಅವರ ಕುಟುಂಬ ಸದಸ್ಯರನ್ನು ಉತ್ತರಾಖಂಡದ ಡೆಹ್ರಾಡೂನ್‌ಗೆ ಕರೆಸಿಕೊಳ್ಳಲು ತುರ್ತು ವ್ಯವಸ್ಥೆ ಮಾಡಿದರು. ಅಷ್ಟೇ ಅಲ್ಲದೆ, ತಾವೂ ಖುದ್ದಾಗಿ ಡೆಹ್ರಾಡೂನ್‌ಗೆ ತೆರಳಿ ಸಂಕಷ್ಟದಲ್ಲಿದ್ದ ಕುಟುಂಬಸ್ಥರೊಂದಿಗೆ ನಿಂತು ಧೈರ್ಯ ತುಂಬಿದರು. ಅಲ್ಲಿನ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ, ಕಾನೂನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ಪಾರ್ಥಿವ ಶರೀರವನ್ನು ಗೌರವಪೂರ್ವಕವಾಗಿ ಕರ್ನಾಟಕಕ್ಕೆ ತರಲು ಅಗತ್ಯವಿರುವ ಎಲ್ಲಾ ವ್ಯವಸ್ಥೆಗಳನ್ನು ಮಾಡಿಕೊಟ್ಟರು.

​ಸಮಾಜಕ್ಕೆ ತುಂಬಲಾರದ ನಷ್ಟ:

ಸಕಲೇಶಪುರ ಭಾಗದಲ್ಲಿ ತಮ್ಮ ಸಮಾಜಮುಖಿ ಕಾರ್ಯಗಳು ಹಾಗೂ ದಾನಧರ್ಮಗಳ ಮೂಲಕವೇ ಗುರುತಿಸಿಕೊಂಡಿದ್ದ ಬಾಚಿಹಳ್ಳಿ ಪ್ರತಾಪ್ ಗೌಡ ಅವರ ಅಕಾಲಿಕ ನಿಧನವು ಅವರ ಕುಟುಂಬಕ್ಕೆ ಮಾತ್ರವಲ್ಲದೆ ಇಡೀ ಜಿಲ್ಲೆಗೆ ತುಂಬಲಾರದ ನಷ್ಟವನ್ನುಂಟು ಮಾಡಿದೆ.

​ದುಃಖತಪ್ತ ಕುಟುಂಬದ ಸದಸ್ಯರಿಗೆ ಖುದ್ದು ಸಾಂತ್ವನ ಹೇಳಿರುವ ಸಂಸದ ಶ್ರೇಯಸ್ ಪಟೇಲ್, “ಈ ನೋವಿನ ಸಮಯದಲ್ಲಿ ನಿಮ್ಮೊಂದಿಗೆ ಸದಾ ಇರುತ್ತೇನೆ. ಮೃತರ ಆತ್ಮಕ್ಕೆ ಭಗವಂತ ಚಿರಶಾಂತಿ ಕರುಣಿಸಲಿ ಹಾಗೂ ಕುಟುಂಬವರ್ಗಕ್ಕೆ ಈ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿ ನೀಡಲಿ” ಎಂದು ಪ್ರಾರ್ಥಿಸಿದ್ದಾರೆ.