- ಹಾಸನ (kannadapost.com): ಪಡಿತರ ಅಕ್ಕಿ ಮತ್ತು ರಾಗಿಯನ್ನು ಅಕ್ರಮವಾಗಿ ಸಂಗ್ರಹಿಸಿ ಕಾಳಸಂತೆಯಲ್ಲಿ ಮಾರಾಟ ಮಾಡಲು ಯತ್ನಿಸಿದ ಆರೋಪದ ಹಿನ್ನೆಲೆಯಲ್ಲಿ ಆಹಾರ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ, 19 ಕ್ವಿಂಟಾಲ್ ಪಡಿತರ ಅಕ್ಕಿ, 2.50 ಕ್ವಿಂಟಾಲ್ ರಾಗಿ ಹಾಗೂ ಆಪೆ ಆಟೋವನ್ನು ವಶಕ್ಕೆ ಪಡೆದಿದ್ದಾರೆ.
ಹಾಸನ ನಗರದ 80 ಅಡಿ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಆಹಾರ ಇಲಾಖೆ ಅಧಿಕಾರಿಗಳು ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ್ದಾರೆ.
ಮನೆ ಹಾಗೂ ಆಟೋದಲ್ಲಿ ಪಡಿತರ ಅಕ್ಕಿ ಸಂಗ್ರಹ
ಪುರುಷೋತ್ತಮ್ ಎಂಬುವವರು ಬಾಡಿಗೆಗೆ ನೀಡಿದ್ದ ಮನೆಯಲ್ಲಿ ಅಕ್ರಮವಾಗಿ ಪಡಿತರ ಆಹಾರಧಾನ್ಯಗಳನ್ನು ಸಂಗ್ರಹಿಸಿಡಲಾಗಿತ್ತು ಎನ್ನಲಾಗಿದೆ. ಅಧಿಕಾರಿಗಳು ದಾಳಿ ನಡೆಸಿದಾಗ ಮನೆಯಲ್ಲಿ ಸುಮಾರು 14 ಕ್ವಿಂಟಾಲ್ ಪಡಿತರ ಅಕ್ಕಿ ಮತ್ತು 2 ಕ್ವಿಂಟಾಲ್ ರಾಗಿ ಪತ್ತೆಯಾಗಿವೆ. ಇವುಗಳ ಅಂದಾಜು ಮೌಲ್ಯ ಕ್ರಮವಾಗಿ ₹33,000 ಮತ್ತು ₹10,800 ಎಂದು ತಿಳಿದುಬಂದಿದೆ.
ಇದೇ ವೇಳೆ, ಆಪೆ ಆಟೋದಲ್ಲಿ ಸಾಗಿಸುತ್ತಿದ್ದ ಸುಮಾರು 5 ಕ್ವಿಂಟಾಲ್ ಪಡಿತರ ಅಕ್ಕಿ ಹಾಗೂ 50 ಕೆಜಿ ರಾಗಿಯನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ದಾಳಿ ವೇಳೆ ಆಟೋ ಬಿಟ್ಟು ಚಾಲಕ ಪರಾರಿ
ಆಹಾರ ಇಲಾಖೆ ಅಧಿಕಾರಿಗಳು ದಾಳಿ ನಡೆಸುತ್ತಿದ್ದಂತೆ ಆಪೆ ಆಟೋವನ್ನು ಬಿಟ್ಟು ಚಾಲಕ ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ. ಮನೆ ಮನೆಗೆ ತೆರಳಿ ಪಡಿತರ ಅಕ್ಕಿ ಹಾಗೂ ರಾಗಿಯನ್ನು ಸಂಗ್ರಹಿಸಿ ಅಕ್ರಮವಾಗಿ ದಾಸ್ತಾನು ಮಾಡಲಾಗುತ್ತಿತ್ತು ಎನ್ನಲಾಗಿದೆ.
ಆಹಾರ ಇಲಾಖೆಯ ಉಪ ನಿರ್ದೇಶಕಿ ವಸಂತಕುಮಾರಿ ಅವರ ನೇತೃತ್ವದಲ್ಲಿ ಆಹಾರ ನಿರೀಕ್ಷಕರಾದ ಜಗನ್ನಾಥ್, ಯತೀಶ್, ಪ್ರಭು ಶಂಕರ್ ಹಾಗೂ ಮಂಜುನಾಥ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಈ ಸಂಬಂಧ ಹಾಸನದ ಪೆನ್ಷನ್ಮೊಹಲ್ಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪಡಿತರ ಆಹಾರಧಾನ್ಯಗಳ ಅಕ್ರಮ ಸಂಗ್ರಹ ಹಾಗೂ ಮಾರಾಟದ ಕುರಿತು ಮುಂದಿನ ತನಿಖೆ ನಡೆಯಬೇಕಿದೆ.












