ನುಗ್ಗೇಹಳ್ಳಿ:ಚನ್ನರಾಯಪಟ್ಟಣ ತಾಲೂಕು ತಗಡೂರು ಗ್ರಾಮದಲ್ಲಿ ಗಣೇಶೋತ್ಸವ ಮತ್ತು ವಿಜಯದಶಮಿ ಸಂಭ್ರಮ ಸಗಡರದಿಂದ ನಡೆಯಿತು.
ಶ್ರೀ ಸಿದ್ದಲಿಂಗೇಶ್ವರ ಸ್ವಾಮಿ ದೇವರ ಜೊತೆಗೆ ಗಣಪತಿಯ ಮೆರವಣಿಗೆ ಗ್ರಾಮದ ಬೀದಿಯಲ್ಲಿ ಸಾಗಿ ಬನ್ನಿ ಮಂಟಪ ತಲುಪಿತು. ಈ ಸಂದರ್ಭದಲ್ಲಿ ಮಹಾ ಮಂಗಳಾರತಿ ಬಳಿಕ ವಿಜಯದಶಮಿ ಪ್ರಯುಕ್ತ ಅಂಬು ಹಾಯುವುದಕ್ಕೆ ಚಾಲನೆ ನೀಡಲಾಯಿತು.
ಲಿಂಗದವೀರರ ಕುಣಿತ, ತಗಡೂರು ಸುಗ್ಗಿ ಕುಣಿತ, ಹಲಗೆ ಕುಣಿತ ಮತ್ತಿತರ ಕಾರ್ಯಕ್ರಮಗಳು ನಡೆದವು.
ಬಳಿಕ ತತ್ಸಂಪ್ರದಾಯದಂತೆ ಬನ್ನಿ ಮಂಟಪದಿಂದ ಬಾಳೆ ಗಿಡಕ್ಕೆ ಕೋವಿ ಹೊಡೆಯುವ ಮೂಲಕ ವಿಜಯದಶಮಿ ಹಬ್ಬವನ್ನು ಸಂಭ್ರಮಿಸಲಾಯಿತು. ಬಳಿಕ ಸಾಮೂಹಿಕವಾಗಿ ಪ್ರಸಾದ ವಿತರಣೆ ನಡೆಯಿತು. ಗಣಪತಿಯನ್ನು ಊರ ಕೆರೆಯಲ್ಲಿ ವಿಸರ್ಜನೆ ಮಾಡಲಾಯಿತು.
ಮೈಸೂರು ಅರಮನೆಯಲ್ಲಿ ಅರಸರು ವಿಜಯದಶಮಿ ಹಬ್ಬ ಆಚರಣೆ ಮಾಡುವ ಮಾದರಿಯಲ್ಲಿಯೇ ತಗಡೂರಿನಲ್ಲಿಯೂ ಬನ್ನಿ ಮಂಟಪದ ಬಳಿ ವಿಜಯದಶಮಿ ಹಬ್ಬ ಆಚರಣೆ ಮಾಡಿಕೊಂಡು ಬಂದಿರುವುದು ವಿಶೇಷ.
ವಿಜಯದಶಮಿ ಹಬ್ಬದ ಸಂಭ್ರಮದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಸೇರಿದಂತೆ ಗ್ರಾಮದ ಪ್ರಮುಖರು, ಗಣ್ಯರು ಭಾಗವಹಿಸಿದ್ದರು












