ಹಾಸನ (kannadapost.com): ನಗರದಲ್ಲಿ ನಿಯಮ ಉಲ್ಲಂಘಿಸಿ ಕಾರ್ಯಾಚರಣೆ ನಡೆಸುತ್ತಿದ್ದ ಪ್ರತಿಷ್ಠಿತ ಪಬ್, ಹೋಟೆಲ್ ಹಾಗೂ ರೆಸ್ಟೋರೆಂಟ್‌ಗಳ ಮೇಲೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಶುಭಾನ್ವಿತಾ ಅವರ ನೇತೃತ್ವದ ತಂಡ ಶನಿವಾರ ರಾತ್ರಿ ದಿಢೀರ್ ದಾಳಿ ನಡೆಸಿ ಬಿಸಿ ಮುಟ್ಟಿಸಿದೆ.
ಹಾಸನ ನಗರದ ‘ಎಸ್.ಎಸ್ ಪಬ್’ (SS Pub) ಹಾಗೂ ‘ಆರ್ಯ ಮ್ಯಾನ್ಷನ್’ (Arya Mansion) ಸೇರಿದಂತೆ ಹಲವು ಪ್ರತಿಷ್ಠಿತ ಪಬ್ ಹಾಗೂ ರೆಸ್ಟೋರೆಂಟ್‌ಗಳ ಮೇಲೆ ಎಸ್ಪಿ, ಹೆಚ್ಚುವರಿ ಎಸ್ಪಿ (ASP) ಹಾಗೂ ಡಿವೈಎಸ್ಪಿ (DySP) ನೇತೃತ್ವದ ಪೊಲೀಸ್ ತಂಡ ಏಕಕಾಲಕ್ಕೆ ದಾಳಿ ನಡೆಸಿ ತಪಾಸಣೆ ನಡೆಸಿತು.
ಲೈಸೆನ್ಸ್ ತೋರಿಸಲು ತಡಬಡಾಯಿಸಿದ ಮ್ಯಾನೇಜರ್‌ಗೆ ಕ್ಲಾಸ್!
ದಾಳಿಯ ವೇಳೆ ಪಬ್‌ನ ಅಧಿಕೃತ ಪರವಾನಗಿ (ಲೈಸೆನ್ಸ್) ಹಾಗೂ ದಾಖಲೆಗಳನ್ನು ತೋರಿಸುವಂತೆ ಎಸ್ಪಿ ಶುಭಾನ್ವಿತಾ ಅವರು ಅಲ್ಲಿನ ಮ್ಯಾನೇಜರ್‌ಗೆ ಸೂಚಿಸಿದರು. ಈ ವೇಳೆ ಸರಿಯಾದ ದಾಖಲೆಗಳನ್ನು ಒದಗಿಸಲು ಮ್ಯಾನೇಜರ್ ತಡಬಡಾಯಿಸಿದ್ದು, ನಿಯಮಗಳನ್ನು ಗಾಳಿಗೆ ತೂರಿ ವ್ಯವಹಾರ ನಡೆಸುತ್ತಿರುವುದಕ್ಕೆ ಎಸ್ಪಿ ಸ್ಥಳದಲ್ಲಿಯೇ ಮ್ಯಾನೇಜರ್‌ಗೆ ತೀವ್ರ ತರಾಟೆಗೆ ತೆಗೆದುಕೊಂಡರು.
ಅಪ್ರಾಪ್ತರಿಗೆ ಮದ್ಯ ಸರಬರಾಜು: ಸ್ಥಳದಲ್ಲೇ ಟೆಸ್ಟ್!
ಪೊಲೀಸರ ತಪಾಸಣೆ ವೇಳೆ ಪಬ್‌ನಲ್ಲಿ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಇಬ್ಬರು ಅಪ್ರಾಪ್ತ ಹುಡುಗರು ಇರುವುದು ಪತ್ತೆಯಾಗಿದೆ. ಕಾನೂನುಬಾಹಿರವಾಗಿ ಅಪ್ರಾಪ್ತರಿಗೆ ಪಬ್‌ನೊಳಗೆ ಪ್ರವೇಶ ನೀಡಿರುವುದಲ್ಲದೆ, ಅವರಿಗೆ ಮದ್ಯ ಸರಬರಾಜು ಮಾಡುತ್ತಿರುವುದನ್ನು ಕಂಡು ಎಸ್ಪಿ ಶುಭಾನ್ವಿತಾ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ತಕ್ಷಣವೇ ಆ ಇಬ್ಬರು ಅಪ್ರಾಪ್ತರನ್ನು ವಶಕ್ಕೆ ಪಡೆದ ಪೊಲೀಸರು, ಸ್ಥಳದಲ್ಲಿಯೇ ಆಲ್ಕೋಮೀಟರ್ (Alcometer) ಮೂಲಕ ತಪಾಸಣೆ ನಡೆಸಿ ಅವರು ಮದ್ಯ ಸೇವನೆ ಮಾಡಿರುವುದನ್ನು ದೃಢಪಡಿಸಿಕೊಂಡರು. ಕಾನೂನು ಉಲ್ಲಂಘಿಸಿ ಅಪ್ರಾಪ್ತರಿಗೆ ಮದ್ಯ ನೀಡಿದ ಪಬ್ ಮಾಲೀಕರು ಹಾಗೂ ವ್ಯವಸ್ಥಾಪಕರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲು ಪೊಲೀಸರು ಮುಂದಾಗಿದ್ದಾರೆ.
ಗೃಹಸಚಿವರ ನಿರ್ದೇಶನದ ಮೇರೆಗೆ ರಾಜ್ಯಾದ್ಯಂತ ಈ ರೀತಿ ದಾಳಿ ನಡೆಯುತ್ತಿದೆ. ಒಂದು ಪಬ್ ನಲ್ಲಿ ಅಪ್ರಾಪ್ತ ರಿಗೆ ಮದ್ಯ ಸರಬರಾಜು ಮಾಡುತ್ತಿರುವುದು, ಇನ್ನೊಂದೆಡೆ ಅಕ್ರಮವಾಗಿ ಸಬ್ ಲೀಸ್ ನೀಡಿರುವುದು, ಅಗ್ನಿ ನಿರೋಧಕ ಅಳವಡಿಸದಿರುವುದು, ನೌಕರರ ಮಾಹಿತಿ ಪಟ್ಟಿ, ಲೈಸೆನ್ಸ್ ನಿರ್ವಹಣೆ ಮಾಡದಿರುವಂತಹ ಅಕ್ರಮಗಳು ಪತ್ತೆಯಾಗಿವೆ. ಕಾನೂನು ಪ್ರಕಾರ ಕ್ರಮ ಜರುಗಿಸಲಾಗುವುದು.ಹಾಸನದಲ್ಲಿ
-ಶುಭಾನ್ವಿತಾ, ಎಸ್ಪಿ












