ಹೊಳೆನರಸೀಪುರ: ಅಕ್ರಮ ಮರಳು ಸಾಗಾಟ, ಸಂಗ್ರಹ ಜಾಲದ ಮೇಲೆ ಪೊಲೀಸರ ದಾಳಿ; ಟಿಪ್ಪರ್ ಲಾರಿ ಜಪ್ತಿ

ಹೊಳೆನರಸೀಪುರ: ತಾಲೂಕಿನ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮವಾಗಿ ಮರಳು ಸಾಗಾಟ ಹಾಗೂ ಸಂಗ್ರಹ ಮಾಡುತ್ತಿದ್ದ ಅಡ್ಡೆಗಳ ಮೇಲೆ ಸಹಾಯಕ ಪೊಲೀಸ್ ಅಧೀಕ್ಷಕರ (ASP) ನೇತೃತ್ವದಲ್ಲಿ ದಾಳಿ ನಡೆಸಲಾಗಿದ್ದು, ಮರಳು ತುಂಬಿದ್ದ ಟಿಪ್ಪರ್ ಲಾರಿಯನ್ನು ವಶಕ್ಕೆ ಪಡೆಯಲಾಗಿದೆ.

​ಘಟನೆಯ ವಿವರ:

ದಿನಾಂಕ ಅ.4ರಂದು ರಾತ್ರಿ ಸುಮಾರು 8:00 ಗಂಟೆಗೆ ಹೊಳೆನರಸೀಪುರ ಉಪವಿಭಾಗದ ಎಎಸ್‌ಪಿ ಅವರಿಗೆ ಬಾತ್ಮೀದಾರರಿಂದ ಖಚಿತ ಮಾಹಿತಿ ದೊರೆತಿತ್ತು. ಊಲಿವಾಲ ಗ್ರಾಮದ ಬಳಿಯ ಅಡಿಕೆಕೆರೆ ಹೊಸೂರು ರಸ್ತೆಯಲ್ಲಿ ಕೆಎ-42-ಎ-4795 (KA-42-A-4795) ನೋಂದಣಿ ಸಂಖ್ಯೆಯ ಟಿಪ್ಪರ್‌ನಲ್ಲಿ ಅಕ್ರಮವಾಗಿ ಮರಳು ತುಂಬಿಕೊಂಡು ಸಾಗಿಸಲು ನಿಲ್ಲಿಸಲಾಗಿದ್ದು, ಜಯನಗರ ಗ್ರಾಮದಲ್ಲಿ ದೊಡ್ಡ ಮಟ್ಟದಲ್ಲಿ ಅಕ್ರಮ ಮರಳನ್ನು ಸಂಗ್ರಹಿಸಿಡಲಾಗಿದೆ ಎಂದು ಮಾಹಿತಿ ಲಭಿಸಿತ್ತು.

​ಮಾಹಿತಿ ಮೇರೆಗೆ ಎಎಸ್‌ಪಿ ಹಾಗೂ ಪೊಲೀಸ್ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದಾಗ, ಊಲಿವಾಲ ಸಮೀಪ ಮರಳು ತುಂಬಿದ್ದ ಟಿಪ್ಪರ್ ಪತ್ತೆಯಾಗಿದೆ. ಬಳಿಕ ಜಯನಗರ ಗ್ರಾಮದ ಸ್ಥಳಕ್ಕೂ ಭೇಟಿ ನೀಡಿ ಪರಿಶೀಲಿಸಿದಾಗ, ಅಲ್ಲಿಯೂ ಅನುಮತಿಯಿಲ್ಲದೆ ಅಕ್ರಮವಾಗಿ ಮರಳು ಸಂಗ್ರಹಿಸಿರುವುದು ಬೆಳಕಿಗೆ ಬಂದಿದೆ.

​ದಾಳಿ ವೇಳೆ ಮರಳು ತುಂಬಿದ್ದ KA-42-A-4795 ಟಿಪ್ಪರ್ ಲಾರಿಯನ್ನು ವಶಕ್ಕೆ ಪಡೆದು ಠಾಣಾ ಆವರಣಕ್ಕೆ ತರಲಾಗಿದೆ. ಯಾವುದೇ ಪರವಾನಗಿ ಇಲ್ಲದೆ ಅಕ್ರಮ ಮರಳು ಸಾಗಾಟ ಮಾಡುತ್ತಿದ್ದ ಟಿಪ್ಪರ್ ಚಾಲಕ, ಮಾಲೀಕ ಹಾಗೂ ಅಕ್ರಮವಾಗಿ ಮರಳು ದಾಸ್ತಾನು ಮಾಡಿದ್ದ ವ್ಯಕ್ತಿಯ ವಿರುದ್ಧ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ನಿಯಮಾವಳಿಗಳಡಿ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ಸಲ್ಲಿಸಲಾಗಿದೆ.