ಹಾಸನ (kannadapost.com): ರಾಜ್ಯದಲ್ಲಿಯೇ ‘ಕರ್ಪೂರ ಪ್ರಿಯೆ’, ‘ಮೂಗುತಿ ಸುಂದರಿ’ ಎಂದೇ ಖ್ಯಾತಿ ಪಡೆದಿರುವ ಮಾಡಾಳು ಗ್ರಾಮದ ಮೂಲಸ್ಥಾನ ಶ್ರೀ ಸ್ವರ್ಣ ಗೌರಿ ಅಮ್ಮನವರ ದರ್ಶನಕ್ಕೆ ಭಕ್ತಸಾಗರವೇ ಹರಿದುಬರುತ್ತಿದ್ದು, ಭಾನುವಾರ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅವರ ಪತ್ನಿ ಕನ್ನಿಕಾಪರಮೇಶ್ವರ್ ಅವರು ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.
ಸಾಮಾನ್ಯ ಭಕ್ತೆಯಂತೆ ಸರತಿ ಸಾಲಿನಲ್ಲಿ ದರ್ಶನ:
ಸ್ವರ್ಣ ಗೌರಿ ದರ್ಶನದ ಏಳನೆಯ ದಿನವಾದ ಭಾನುವಾರ ಬೆಳಿಗ್ಗೆ 11 ಗಂಟೆಗೆ ದೇವಾಲಯಕ್ಕೆ ಆಗಮಿಸಿದ ಕನ್ನಿಕಾಪರಮೇಶ್ವರ್ ಅವರು, ಯಾವುದೇ ವಿಐಪಿ (VIP) ಸಂಸ್ಕೃತಿ ತೋರದೆ ಸಾಮಾನ್ಯ ಭಕ್ತರಂತೆ ಸರತಿ ಸಾಲಿನಲ್ಲಿಯೇ ನಿಂತು ಅಮ್ಮನವರ ದರ್ಶನ ಪಡೆದರು. ದೇವಿಗೆ ಸೀರೆ ಅರ್ಪಿಸಿ ವಿಶೇಷ ಪೂಜೆ ಸಲ್ಲಿಸಿದ ಅವರು, ರಾಜ್ಯಕ್ಕೆ ಹಾಗೂ ಜನತೆಗೆ ಒಳ್ಳೆಯದಾಗಲಿ ಎಂದು ಭಕ್ತಿಯಿಂದ ಪ್ರಾರ್ಥಿಸಿದರು.
‘ಕೋಡಿಮಠ ಹಾಗೂ ಮಾಡಾಳು ಶಕ್ತಿಪೀಠಗಳು’
ದೇವಾಲಯದಿಂದ ಹೊರಬಂದು ಮಾಧ್ಯಮಗಳೊಂದಿಗೆ ಮಾತನಾಡಿದ ಕನ್ನಿಕಾಪರಮೇಶ್ವರಿ ಅವರು, “ಮಾಡಾಳು ಮೂಲಸ್ಥಾನ ಶ್ರೀ ಸ್ವರ್ಣ ಗೌರಿ ದೇವಿ ಹಾಗೂ ಹಾರನಹಳ್ಳಿ ಸುಕ್ಷೇತ್ರ ಕೋಡಿಮಠಕ್ಕೆ ನಾವು ಹಿಂದಿನಿಂದಲೂ ನಡೆದುಕೊಂಡು ಬರುತ್ತಿದ್ದೇವೆ. ಕ್ಷೇತ್ರದ ಪೀಠಾಧಿಪತಿಗಳಾದ ಜಗದ್ಗುರು ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಅವರು ನಮ್ಮನ್ನು ಸದಾ ಆಶೀರ್ವದಿಸುತ್ತಾ ಬರುತ್ತಿದ್ದಾರೆ,” ಎಂದು ಸ್ಮರಿಸಿದರು.
”ಮಾಡಾಳು ಗೌರಮ್ಮ ದೇವಿ ಮತ್ತು ಹಾರನಹಳ್ಳಿ ಕೋಡಿಮಠ ಎರಡೂ ಕ್ಷೇತ್ರಗಳು ‘ಶಕ್ತಿಪೀಠ’ಗಳಾಗಿದ್ದು, ಇಲ್ಲಿಗೆ ನಂಬಿ ಬರುವ ಭಕ್ತರ ಮನದ ಇಷ್ಟಾರ್ಥಗಳನ್ನು ಈಡೇರಿಸುತ್ತಾ ಬಂದಿವೆ,” ಎಂದು ತಮ್ಮ ಭಕ್ತಿಭಾವವನ್ನು ವ್ಯಕ್ತಪಡಿಸಿದರು.
ಉಪಸ್ಥಿತರಿದ್ದ ಗಣ್ಯರು:
ಈ ಸಂದರ್ಭದಲ್ಲಿ ದೇವಾಲಯ ಸೇವಾ ಸಮಿತಿ ಅಧ್ಯಕ್ಷ ಎಂ.ಎಸ್. ನಟರಾಜ್, ಮುಖಂಡರಾದ ಎಂ.ಸಿ. ನಟರಾಜ್, ಮಾಡಾಳು ಶಿವಲಿಂಗಪ್ಪ, ಮಳ್ಳಿ ಎಂ.ಜಿ. ಶಿವಣ್ಣ, ಎಂ.ವಿ. ಸ್ವಾಮಿ, ಎಂ.ಟಿ. ಲೋಕೇಶ್, ಸೋಮಶೇಖರ್, ಡಿಎಸ್ಎಸ್ ಮುಖಂಡ ಚಂದ್ರಪ್ಪ, ಗ್ರಾಮಾಂತರ ವೃತ್ತ ನಿರೀಕ್ಷಕ (ಸಿಪಿಐ) ಅರುಣ್ ಕುಮಾರ್ ಹಾಗೂ ಪಿಎಸ್ಐ ಸುರೇಶ್ ಸೇರಿದಂತೆ ದೇವಾಲಯದ ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.












