ಸಕಲೇಶಪುರ: ಡಿಕೆಶಿ ಭೇಟಿ ಭದ್ರತೆ ನಡುವೆಯೇ ಬೆಳ್ಳಂಬೆಳಗ್ಗೆ ಸರಗಳ್ಳರ ಕೈಚಳಕ; ಮಹಿಳೆಯ 45 ಗ್ರಾಂ ಚಿನ್ನದ ಸರ ದೋಚಿದ ಖದೀಮರು

ಪ್ರದೀಪ್ ಬಾಳ್ಳುಪೇಟೆ

ಸಕಲೇಶಪುರ (kannadapost.com): ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಇಂದು ಸಕಲೇಶಪುರಕ್ಕೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಪಟ್ಟಣದಾದ್ಯಂತ ಬಿಗಿ ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ. ಸಾಕಷ್ಟು ಪೊಲೀಸರು ಗಸ್ತು ತಿರುಗುತ್ತಿದ್ದರೂ, ಕಳ್ಳರು ಬೆಳ್ಳಂಬೆಳಗ್ಗೆಯೇ ಪಾದಚಾರಿ ಮಹಿಳೆಯೊಬ್ಬರ ಕತ್ತಿನಲ್ಲಿದ್ದ ಚಿನ್ನದ ಸರವನ್ನು ದೋಚಿ ಪರಾರಿಯಾಗಿರುವ ಆಘಾತಕಾರಿ ಘಟನೆ ನಡೆದಿದ್ದು, ಪೊಲೀಸರಿಗೇ ಸವಾಲೆಸೆದಂತಿದೆ.

​ಭಾನುವಾರ ಬೆಳಿಗ್ಗೆ 6:10ರ ಸುಮಾರಿಗೆ ಪಟ್ಟಣದ ಹೊಳೆ ಮಲ್ಲೇಶ್ವರ ದೇವಸ್ಥಾನದ ಸಮೀಪ ಈ ಕೃತ್ಯ ನಡೆದಿದೆ. ಪಟ್ಟಣದ ಬ್ರಾಹ್ಮಣರ ಬೀದಿ ನಿವಾಸಿ ಹಾಗೂ ನಿವೃತ್ತ ಕೆಎಸ್‌ಆರ್‌ಟಿಸಿ ಚಾಲಕ ಶಾಂತಪ್ಪ ಅವರ ಪತ್ನಿ ರಾಣಿಯಮ್ಮ ಎಂಬುವವರೇ ಸರ ಕಳೆದುಕೊಂಡ ಮಹಿಳೆ.

ನಡೆದಿದ್ದೇನು?

ರಾಣಿಯಮ್ಮ ಅವರು ಬೆಳಿಗ್ಗೆ ದೇವಸ್ಥಾನದ ಸಮೀಪ ನಡೆದುಕೊಂಡು ಹೋಗುತ್ತಿದ್ದಾಗ, ಬೈಕ್‌ನಲ್ಲಿ ಬಂದ ಇಬ್ಬರು ಖದೀಮರು ಈ ಕೃತ್ಯ ಎಸಗಿದ್ದಾರೆ. ಬೈಕ್‌ನ ಹಿಂಬದಿ ಕುಳಿತಿದ್ದ ಕಳ್ಳನು, ರಾಣಿಯಮ್ಮ ಅವರ ಕತ್ತಿನಲ್ಲಿದ್ದ ಸುಮಾರು 45 ಗ್ರಾಂ ತೂಕದ ಚಿನ್ನದ ಸರವನ್ನು ಏಕಾಏಕಿ ಎಳೆದುಕೊಂಡಿದ್ದಾನೆ. ಕಣ್ಣುಮುಚ್ಚಿ ತೆರೆಯುವಷ್ಟರಲ್ಲಿ ಇಬ್ಬರೂ ಬೈಕ್‌ನಲ್ಲಿ ವೇಗವಾಗಿ ಪರಾರಿಯಾಗಿದ್ದಾರೆ.

ಸಿಎಂ ಭದ್ರತೆ ನಡುವೆಯೂ ಕಳ್ಳರ ದುಸ್ಸಾಹಸ:

ಪಟ್ಟಣದ ಹೃದಯ ಭಾಗದಲ್ಲೇ ಬೆಳಗಿನ ಜಾವ ನಡೆದಿರುವ ಈ ಘಟನೆ ಸಾರ್ವಜನಿಕರಲ್ಲಿ, ಅದರಲ್ಲೂ ಒಂಟಿಯಾಗಿ ಓಡಾಡುವ ಮಹಿಳೆಯರಲ್ಲಿ ತೀವ್ರ ಆತಂಕ ಮೂಡಿಸಿದೆ. ಮುಖ್ಯಮಂತ್ರಿಗಳ ಭೇಟಿ ಹಿನ್ನೆಲೆಯಲ್ಲಿ ಪೊಲೀಸ್ ಸರ್ಪಗಾವಲು ಇರುವಾಗಲೇ ಕಳ್ಳರು ಈ ದುಸ್ಸಾಹಸಕ್ಕೆ ಕೈಹಾಕಿರುವುದು ಸಾರ್ವಜನಿಕರ ಅಚ್ಚರಿಗೆ ಕಾರಣವಾಗಿದೆ.

​ಘಟನೆ ಕುರಿತು ರಾಣಿಯಮ್ಮ ಅವರು ಸಕಲೇಶಪುರ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ತೀವ್ರವಾಗಿ ಪರಿಶೀಲಿಸುತ್ತಿದ್ದು, ಸರಗಳ್ಳರ ಪತ್ತೆಗೆ ಜಾಲ ಬೀಸಿದ್ದಾರೆ.

​ತಕ್ಷಣವೇ ಪೊಲೀಸರು ಸರಗಳ್ಳರನ್ನು ಬಂಧಿಸಿ, ಮಹಿಳೆಗೆ ನ್ಯಾಯ ಒದಗಿಸಬೇಕು ಎಂದು ಸ್ಥಳೀಯ ನಿವಾಸಿ ಹಾಗೂ ಬಿಜೆಪಿ ಮುಖಂಡ ಬಾಬಣ್ಣ ಆಗ್ರಹಿಸಿದ್ದಾರೆ.