ಸಕಲೇಶಪುರ: ಲಾಡ್ಜ್‌ನಲ್ಲಿ ಬೆಂಗಳೂರು ಮೂಲದ ಯುವತಿಯ ಅನುಮಾನಾಸ್ಪದ ಸಾವು; ಜೊತೆಗಿದ್ದ ಯುವಕರು ನಾಪತ್ತೆ?

ವರದಿ-ಪ್ರದೀಪ್ ಬಾಳ್ಳುಪೇಟೆ

ಸಕಲೇಶಪುರ (kannadapost.com): ತಾಲೂಕಿನ ಲಾಡ್ಜ್‌ವೊಂದರಲ್ಲಿ ಬೆಂಗಳೂರು ಮೂಲದ ಯುವತಿಯೋರ್ವಳು ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿರುವ ಘಟನೆ ನಡೆದಿದ್ದು, ಆಕೆಯ ಜೊತೆಗಿದ್ದ ಯುವಕರು ನಾಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

​ಮೃತ ಯುವತಿಯನ್ನು ಬೆಂಗಳೂರು ಮೂಲದ ವರ್ಷ (23) ಎಂದು ಗುರುತಿಸಲಾಗಿದೆ. ಸಕಲೇಶಪುರ ತಾಲೂಕಿನ ಹೆತ್ತೂರು ಹೋಬಳಿಯ ವಳಲಹಳ್ಳಿ ಕೂಡಿಗೆಯಲ್ಲಿರುವ ‘ಶ್ರೀದೇವಿ ಲಾಡ್ಜ್‌’ನಲ್ಲಿ ಈ ಘಟನೆ ಸಂಭವಿಸಿದೆ.

ಘಟನೆಯ ವಿವರ:

ಸ್ಥಳೀಯರು ನೀಡಿರುವ ಮಾಹಿತಿ ಪ್ರಕಾರ, ಮೃತ ವರ್ಷ ಸೆಪ್ಟೆಂಬರ್ 11ರ ಶುಕ್ರವಾರದಂದು ಇಬ್ಬರು ಯುವಕರ ಜೊತೆಗೆ ಈ ಲಾಡ್ಜ್‌ಗೆ ಬಂದು ರೂಮ್ ಪಡೆದಿದ್ದಳು. ಯುವತಿ ಬಾತ್ ರೂಂನಲ್ಲಿ ಸ್ನಾನಕ್ಕೆ ಹೋದಾಗ ದಿಢೀರ್ ಪ್ರಜ್ಞೆ ಕಳೆದುಕೊಂಡು ಬಿದ್ದಿದ್ದಳು ಎನ್ನಲಾಗಿದೆ. ಕೂಡಲೇ ಜೊತೆಗಿದ್ದ ಯುವಕರು ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ಆಕೆಯನ್ನು ಪರೀಕ್ಷಿಸಿದ ವೈದ್ಯರು ಯುವತಿ ಅದಾಗಲೇ ಮೃತಪಟ್ಟಿರುವುದಾಗಿ ಸ್ಪಷ್ಟಪಡಿಸಿದ್ದಾರೆ.

ಯುವಕರು ಎಸ್ಕೇಪ್?

ಯುವತಿ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸುತ್ತಿದ್ದಂತೆ, ಆಕೆಯನ್ನು ಆಸ್ಪತ್ರೆಗೆ ಕರೆತಂದಿದ್ದ ಯುವಕರು ಅಲ್ಲಿಂದ ಕಾಲ್ಕಿತ್ತಿದ್ದಾರೆ ಎನ್ನಲಾಗಿದೆ. ಯುವತಿ ಸಾವಿನ ಬಳಿಕ ಯುವಕರ ಈ ವರ್ತನೆ ಪ್ರಕರಣವನ್ನು ಮತ್ತಷ್ಟು ಅನುಮಾನಾಸ್ಪದಗೊಳಿಸಿದೆ.

​ಸದ್ಯ ಯುವತಿಯ ಶವವನ್ನು ಸಕಲೇಶಪುರದ ಕ್ರಾಫರ್ಡ್ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ. ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕವಷ್ಟೇ ಯುವತಿಯ ಸಾವಿಗೆ ನಿಖರ ಕಾರಣವೇನು ಎಂಬುದು ತಿಳಿದುಬರಬೇಕಿದೆ.

ಅನಧಿಕೃತ ಲಾಡ್ಜ್ ಆರೋಪ:

ಘಟನೆ ನಡೆದ ವಳಲಹಳ್ಳಿ ಕೂಡಿಗೆಯ ಶ್ರೀದೇವಿ ಲಾಡ್ಜ್ ಅನ್ನು ಯಾವುದೇ ಪರವಾನಗಿ ಇಲ್ಲದೆ, ಸಂಪೂರ್ಣ ಅನಧಿಕೃತವಾಗಿ ನಡೆಸಲಾಗುತ್ತಿತ್ತು ಎಂದು ಸ್ಥಳೀಯರು ಗಂಭೀರ ಆರೋಪ ಮಾಡಿದ್ದಾರೆ.

​ಮಾಹಿತಿ ತಿಳಿಯುತ್ತಿದ್ದಂತೆ ಡಿವೈಎಸ್‌ಪಿ ಮಾಲತೀಶ್ ಹಾಗೂ ಸಕಲೇಶಪುರ ಗ್ರಾಮಾಂತರ ಠಾಣೆ ಪೊಲೀಸರು ಲಾಡ್ಜ್‌ಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಮಾಹಿತಿ ಕಲೆಹಾಕುತ್ತಿದ್ದು, ಪರಾರಿಯಾಗಿರುವ ಯುವಕರಿಗಾಗಿ ಶೋಧ ಕಾರ್ಯ ಆರಂಭಿಸಿದ್ದಾರೆ.