ಹಾಸನ: ನಮ್ಮ ಕುಟುಂಬದ ಹುಡುಗ ತಪ್ಪು ಮಾಡಿರಬಹುದು, ಸರ್ಕಾರ ಸಂತ್ರಸ್ತ ಮಹಿಳೆಯರಿಗೆ ಯಾವ ನ್ಯಾಯ ಒದಗಿಸಿದೆ?: ಎಚ್.ಡಿ.ಕುಮಾರಸ್ವಾಮಿ ಪ್ರಶ್ನೆ

ಹಾಸನದ ಮಾವಿನಕೆರೆಯಲ್ಲಿ ಸರ್ಕಾರದ ವಿರುದ್ಧ ಗುಡುಗಿದ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ಜೈಲಿನಲ್ಲಿರುವವನಿಗೆ ಫೋನ್ ಕೊಟ್ಟವರು ಯಾರು? ನೈಸ್, ಕೆಪಿಎಸ್ಸಿ ಹಗರಣ ಮುಚ್ಚಿಹಾಕಲು ನಮ್ಮ ಧ್ವನಿ ಅಡಗಿಸುವ ಯತ್ನ ಎಂದು ಆರೋಪಿಸಿದ್ದಾರೆ.

ಹಾಸನ (kannadapost.com): “ರಾಜ್ಯ ಕಾಂಗ್ರೆಸ್ ಸರ್ಕಾರ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಅವರ ಮೊದಲ ಆದ್ಯತೆಯೇ ದೇವೇಗೌಡರ ಕುಟುಂಬವನ್ನು ಸರ್ವನಾಶ ಮಾಡುವುದಾಗಿದೆ. ಆದರೆ ನಾನು ಇವರ ಯಾವ ಬೆದರಿಕೆಗೂ ಹೆದರುವುದಿಲ್ಲ” ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.

​ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಮಾವಿನಕೆರೆಯಲ್ಲಿ ಮಂಗಳವಾರ ಮಾತನಾಡಿದ ಅವರು, ಪರಪ್ಪನ ಅಗ್ರಹಾರ ಜೈಲಿನಲ್ಲಿ ಮೊಬೈಲ್ ಪತ್ತೆಯಾದ ವಿಚಾರ, ಹನಿಟ್ರ್ಯಾಪ್ ಹಾಗೂ ರಾಜ್ಯ ಸರ್ಕಾರದ ದ್ವೇಷದ ರಾಜಕಾರಣದ ವಿರುದ್ಧ ಸಾಲು ಸಾಲು ಗಂಭೀರ ಆರೋಪಗಳನ್ನು ಮಾಡಿದರು.

ಜೈಲಿಗೆ ಫೋನ್ ಮತ್ತು ಅಶ್ಲೀಲ ಚಿತ್ರ ಪೂರೈಸಿದ್ದು ಯಾರು?

​ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಪ್ರಜ್ವಲ್ ರೇವಣ್ಣ ವಿಚಾರವನ್ನು ಪರೋಕ್ಷವಾಗಿ ಪ್ರಸ್ತಾಪಿಸಿದ ಅವರು, “ಕಳೆದ ಎರಡು ವರ್ಷಗಳಿಂದ ಜೈಲಿನಲ್ಲಿದ್ದಾಗ ಇಲ್ಲದ ಫೋನ್ ಈಗ ಎಲ್ಲಿಂದ ಬಂತು? ನಾನು ಬಿಡದಿ ಸ್ಮಾರ್ಟ್ ಸಿಟಿ, ಕೆಪಿಎಸ್‌ಸಿ ಹಗರಣ ಹಾಗೂ ನೈಸ್ ಅಕ್ರಮಗಳ ಬಗ್ಗೆ ಮಾತನಾಡಿದಾಗ ಮಾತ್ರ ಜೈಲಿನಲ್ಲಿ ಫೋನ್ ಇಟ್ಟುಕೊಂಡಿದ್ದಾನೆ ಎಂಬ ಹೊಸ ಕಥೆ ಶುರುವಾಗಿದೆ. ಆ ಹುಡುಗನಿಗೆ ಫೋನ್ ಕೊಟ್ಟವರು ಯಾರು? ಆ ಫೋನ್‌ನಲ್ಲಿ ಅಶ್ಲೀಲ ಚಿತ್ರಗಳನ್ನು ತುಂಬಿ ಜೈಲಿಗೆ ಪೂರೈಸಿದವರು ಯಾರು? ಇದು ನನ್ನ ಧ್ವನಿ ಅಡಗಿಸುವ ಷಡ್ಯಂತ್ರವಲ್ಲವೇ?” ಎಂದು ಪ್ರಶ್ನಿಸಿದ್ದಾರೆ.

ಸಂತ್ರಸ್ತೆಯರಿಗೆ ನ್ಯಾಯ ಕೊಟ್ಟಿದ್ದೀರಾ?

​”ಪೆನ್‌ಡ್ರೈವ್ ವಿಚಾರವಾಗಿ 400 ರೇಪ್ ಆಗಿದೆ ಎಂದು ದೊಡ್ಡ ಕಥೆ ಕಟ್ಟಿದಿರಿ. ನಮ್ಮ ಕುಟುಂಬದ ಹುಡುಗ ತಪ್ಪು ಮಾಡಿರಬಹುದು, ಆದರೆ ಈ ಸರ್ಕಾರ ಆ ಸಂತ್ರಸ್ತ ಹೆಣ್ಣುಮಕ್ಕಳಿಗೆ ಯಾವ ನ್ಯಾಯ ಒದಗಿಸಿದೆ? ಎಷ್ಟು ಕುಟುಂಬಗಳನ್ನು ಸರಿಪಡಿಸಿದ್ದೀರಾ?” ಎಂದು ಸರ್ಕಾರದ ಕಾರ್ಯವೈಖರಿಯನ್ನು ತರಾಟೆಗೆ ತೆಗೆದುಕೊಂಡರು.

48 ಜನರ ಹನಿಟ್ರ್ಯಾಪ್ ಬ್ಲಾಕ್‌ಮೇಲ್

​ಕಾಂಗ್ರೆಸ್ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಎಚ್‌ಡಿಕೆ, “ಇದೇ ಸರ್ಕಾರದ ಸಚಿವರೊಬ್ಬರು 48 ಜನರ ಹನಿಟ್ರ್ಯಾಪ್ ಬಗ್ಗೆ ಮಾತನಾಡಿದ್ದರು, ಕೇವಲ 24 ಗಂಟೆಯಲ್ಲಿ ಅವರ ಬಾಯಿ ಮುಚ್ಚಿಸಲಾಯಿತು. ನ್ಯಾಯಾಧೀಶರು, ಕೇಂದ್ರ ಮಂತ್ರಿಗಳು, ಕೇಂದ್ರ ನಾಯಕರು ಹಾಗೂ ಪ್ರಭಾವಿ ರಾಜಕಾರಣಿಗಳ ಸಿಡಿಗಳನ್ನು ಇಟ್ಟುಕೊಂಡು ಬ್ಲಾಕ್‌ಮೇಲ್ ಮಾಡುತ್ತಿದ್ದಾರೆ. ಆದರೆ ನಾನು ಸತ್ಯ ಮತ್ತು ನ್ಯಾಯಕ್ಕೆ ಮಾತ್ರ ತಲೆ ಬಾಗುತ್ತೇನೆ, ಇವರ ಈ ಬೆದರಿಕೆಗಳಿಗೆ ಹೆದರಿ ಜನರನ್ನು ಬಿಟ್ಟು ಎಲ್ಲೂ ಹೋಗುವುದಿಲ್ಲ” ಎಂದು ಗುಡುಗಿದರು.

​”ದೇವೇಗೌಡರು ಜೀವನಪೂರ್ತಿ ಅಕ್ರಮಗಳ ವಿರುದ್ಧವೇ ಹೋರಾಡಿದವರು. ಅವರು ನನಗೆ ಜನ್ಮ ನೀಡಿದ್ದಾರೆ, ನಾನು ಅವರ ಹಾದಿಯಲ್ಲೇ ಸಾಗುತ್ತೇನೆ” ಎಂದು ಕುಮಾರಸ್ವಾಮಿ ಸ್ಪಷ್ಟಪಡಿಸಿದರು.