ಹಾಸನ:ವಿಜಯದಶಮಿಯಿಂದ ಯುದ್ಧ ಶುರು, ಸರ್ಕಾರದ ನಿದ್ದೆಗೆಡಿಸುತ್ತೇನೆ: ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಗುಡುಗು!

ಹಿಂದೆ ನಾನು ತೋರಿಸಿದ ಪೆನ್‌ಡ್ರೈವ್‌ನಲ್ಲಿ ಮುಖ್ಯಮಂತ್ರಿಗಳ ಹೆಸರೇ ಇತ್ತು; ರಾಜ್ಯ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸುವ ವಿಷಯ ಹೊರತರಲಿದ್ದೇನೆ ಎಂದ ಎಚ್‌ಡಿಕೆ.

ಹಾಸನ (kannadapost.com): ಮುಂಬರುವ ವಿಜಯದಶಮಿ ಹಬ್ಬದ ಸಂದರ್ಭದಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ನೇರ ರಾಜಕೀಯ ‘ಯುದ್ಧ’ ಆರಂಭಿಸುವುದಾಗಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಎಚ್ಚರಿಕೆ ನೀಡಿದ್ದಾರೆ. “ನಾನು ಸುಮ್ಮನೆ ಹೆದರಿಸುವ ಜಾಯಮಾನದವನಲ್ಲ. ವಿಜಯದಶಮಿಯಿಂದಲೇ ಎಲ್ಲವೂ ಶುರುವಾಗಲಿದೆ, ಆಡಳಿತ ಪಕ್ಷದವರ ನಿದ್ದೆಗೆಡಿಸುವುದು ಖಚಿತ” ಎಂದು ಅವರು ಗುಡುಗಿದ್ದಾರೆ.

​ಹಾಸನ ಜಿಲ್ಲೆ ಹೊಳೆನರಸೀಪುರ ತಾಲೂಕಿನ ಮಾವಿನಕೆರೆಯಲ್ಲಿ ಮಂಗಳವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರದ ವೈಫಲ್ಯಗಳು ಹಾಗೂ ಕಾಂಗ್ರೆಸ್ ನಾಯಕರ ಒಳರಾಜಕೀಯದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ವಿಜಯದಶಮಿಯಿಂದ ರಣಕಹಳೆ

​”ರಾಜಮಹಾರಾಜರ ಕಾಲದಲ್ಲಿ ವಿಜಯದಶಮಿಯ ಪವಿತ್ರ ದಿನದಂದು ವಿಜಯಯಾತ್ರೆ ಹಾಗೂ ಯುದ್ಧಕ್ಕೆ ತೆರಳುವ ಪದ್ಧತಿ ಇತ್ತು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾನೂ ಕೂಡ ಮುಂಬರುವ ವಿಜಯದಶಮಿಯಂದೇ ರಾಜಕೀಯ ಸಮರ ಪ್ರಾರಂಭಿಸುತ್ತೇನೆ. ರಾಜ್ಯ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸುವಂತಹ ಗಂಭೀರ ವಿಷಯಗಳನ್ನು ಜನರ ಮುಂದಿಡಲಿದ್ದೇನೆ. ಮಾಧ್ಯಮ ಮಿತ್ರರಿಗೆ ನಿರಾಸೆ ಮಾಡದೆ ಒಳ್ಳೆಯ ಸುದ್ದಿಯ ಆಹಾರ ಕೊಡುತ್ತೇನೆ. ಸರ್ಕಾರ ತಪ್ಪು ಮುಚ್ಚಿಕೊಳ್ಳಲು ಸಮಯ ತೆಗೆದುಕೊಳ್ಳಲಿ, ನನಗೇನೂ ಆತುರವಿಲ್ಲ” ಎಂದು ಸವಾಲು ಹಾಕಿದರು.

ಪೆನ್‌ಡ್ರೈವ್ ರಹಸ್ಯ ಬಿಚ್ಚಿಟ್ಟ ಕೇಂದ್ರ ಸಚಿವರು

​ವಿಧಾನಸೌಧದಲ್ಲಿ ಈ ಹಿಂದೆ ತೋರ್ಪಡಿಸಿದ್ದ ಪೆನ್‌ಡ್ರೈವ್ ವಿಚಾರವಾಗಿ ಮಾತನಾಡಿದ ಕುಮಾರಸ್ವಾಮಿ, “ನಾನು ಖಾಲಿ ಪೆನ್‌ಡ್ರೈವ್ ತೋರಿಸಿರಲಿಲ್ಲ. ಅವರು ರಾಜ್ಯದ ತುಂಬಾ ಹಂಚಿದ 1 ಲಕ್ಷ ಪೆನ್‌ಡ್ರೈವ್‌ಗಳೇ ಬೇರೆ, ನನ್ನ ಬಳಿ ಇದ್ದ ಪೆನ್‌ಡ್ರೈವ್‌ ವಿಷಯವೇ ಬೇರೆ. ವರ್ಗಾವಣೆ ದಂಧೆಗೆ ಸಂಬಂಧಿಸಿದಂತೆ ಹಣ ವಸೂಲಿ ಮಾಡುವ ಬಗ್ಗೆ ಇಬ್ಬರು ಇಂಜಿನಿಯರ್‌ಗಳು ಸಾಕ್ಷಾತ್ ಮುಖ್ಯಮಂತ್ರಿಗಳ ಹೆಸರನ್ನೇ ಪ್ರಸ್ತಾಪಿಸಿ ಮಾತನಾಡಿದ ಆಡಿಯೋ ಅದರಲ್ಲಿತ್ತು. ಆಗ ಹಿರಿಯರು ಕಾಂಗ್ರೆಸ್ ಶಕ್ತಿಯನ್ನು ಒಮ್ಮೆಲೇ ಹೊಡೆಯಬೇಡಿ, ಸಮಯ ನೋಡಿ ಮಾತನಾಡಿ ಎಂದಿದ್ದರಿಂದ ಬಿಡುಗಡೆ ಮಾಡಲಿಲ್ಲ. ಈಗ ಅದು ಹಳೆಯ ವಿಚಾರ (ಔಟ್‌ಡೇಟೆಡ್) ಆಗಿದೆ. ಆದರೆ, ಮುಂದೆ ಬರಲಿರುವ ದಾಖಲೆಗಳು ಮತ್ತಷ್ಟು ಪ್ರಬಲವಾಗಿರಲಿವೆ” ಎಂದರು.

ಕಾಂಗ್ರೆಸ್‌ನಲ್ಲೇ ನಾಯಕರನ್ನು ಮುಗಿಸುವ ಹುನ್ನಾರ

​ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಆಂತರಿಕ ಭಿನ್ನಮತವನ್ನು ಪ್ರಸ್ತಾಪಿಸಿದ ಅವರು, “ಈಗಾಗಲೇ ಕೆ.ಎನ್. ರಾಜಣ್ಣ ಅವರ ಧ್ವನಿ ಅಡಗಿಸಿದ್ದಾರೆ. ರಮೇಶ್ ಜಾರಕಿಹೋಳಿ ಅವರನ್ನು ಮುಗಿಸಿದರು. ಈಗ ಮುಂದಿನ ಮುಖ್ಯಮಂತ್ರಿ ಆಕಾಂಕ್ಷಿ ಎಂದು ಹೇಳಿಕೊಳ್ಳುತ್ತಿದ್ದ ಸತೀಶ್ ಜಾರಕಿಹೋಳಿ ಅವರನ್ನೇ ಮುಗಿಸಲು ತೆರೆಮರೆಯಲ್ಲಿ ಸಿದ್ಧತೆ ಮಾಡಿಕೊಂಡಿದ್ದಾರೆ. ಇನ್ನು ವಾಲ್ಮೀಕಿ ನಿಗಮದ ವಿಚಾರದಲ್ಲಿ ಬಿ. ನಾಗೇಂದ್ರ ಅವರಿಗೆ ಏನಾಯ್ತು ಎಂಬುದು ಎಲ್ಲರಿಗೂ ತಿಳಿದಿದೆ. ಅವರ ಇಡೀ ಜೀವನವೇ ದ್ವೇಷದ ರಾಜಕಾರಣದಿಂದ ಕೂಡಿದೆ” ಎಂದು ಆರೋಪಿಸಿದರು.

‘ಬುದ್ಧಿವಂತರೇ ಸತ್ತವರ ಹೆಬ್ಬೆಟ್ಟು ಒತ್ತಿಸಿಕೊಳ್ಳುವುದು’

​’ಕೇವಲ ವಿದ್ಯಾವಂತರಾದರೆ ಸಾಲದು, ಬುದ್ಧಿವಂತರಾಗಬೇಕು’ ಎಂಬ ಆಡಳಿತ ಪಕ್ಷದ ನಾಯಕರ ಹೇಳಿಕೆಗೆ ತೀಕ್ಷ್ಣ ವ್ಯಂಗ್ಯವಾಡಿದ ಎಚ್‌ಡಿಕೆ, “ಅವರು ಹೇಳಿದ್ದು ನಿಜವಿರಬಹುದು. ವಿದ್ಯಾವಂತರು ಸತ್ತವರ ಹೆಸರಿನಲ್ಲಿ ಹೆಬ್ಬೆಟ್ಟು ಒತ್ತಿಸಿಕೊಳ್ಳಲು ಸಾಧ್ಯವೇ? ಅಂತಹ ಕೃತ್ಯಗಳನ್ನು ಮಾಡುವುದು ಬುದ್ಧಿವಂತರೇ. ಈಗ ಗಂಟೆ ಹೊಡೆಯುತ್ತಿದೆ, ಪ್ರತಿಯೊಂದಕ್ಕೂ ಲೆಕ್ಕ ಕೊಡುವ ಕಾಲ ಸನ್ನಿಹಿತವಾಗಿದೆ” ಎಂದು ಎಚ್ಚರಿಸಿದರು.