ಹಾಸನ: ಮಳೆ ಅಭಾವ, ಬೆಳೆ ನಷ್ಟ ಹಾಗೂ ಸಾಲದ ಸುಳಿಗೆ ಸಿಲುಕಿ ನಲುಗಿದ್ದ ಅನ್ನದಾತನೊಬ್ಬ ಕಳೆನಾಶಕ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ಹಾಸನ ತಾಲ್ಲೂಕಿನ ಕಟ್ಟಾಯ ಹೋಬಳಿಯ ದೋರನಹಳ್ಳಿ ಗ್ರಾಮದಲ್ಲಿ ನಡೆದಿದೆ. ಜಗದೀಶ್ (45) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ ರೈತ.
ಸಾಲದ ಸುಳಿಯಲ್ಲಿ ಅನ್ನದಾತ:
ರೈತ ಜಗದೀಶ್ ಅವರು ತಮ್ಮ ಸ್ವಂತ ಜಮೀನಿನ ಜೊತೆಗೆ, ಸುಮಾರು ಎಂಟು ಎಕರೆ ಜಮೀನನ್ನು ಗುತ್ತಿಗೆಗೆ ಪಡೆದು ಕೃಷಿ ಮಾಡುತ್ತಿದ್ದರು. ಅಪಾರ ಭರವಸೆಯೊಂದಿಗೆ ಶುಂಠಿ, ಆಲೂಗೆಡ್ಡೆ ಮತ್ತು ಮೆಕ್ಕೆಜೋಳವನ್ನು ಬಿತ್ತನೆ ಮಾಡಿದ್ದರು. ಇದಕ್ಕಾಗಿ ಕಾವೇರಿ ಗ್ರಾಮೀಣ ಬ್ಯಾಂಕ್, ಬ್ಯಾಂಕ್ ಆಫ್ ಬರೋಡ, ವಿವಿಧ ಸಂಘ-ಸಂಸ್ಥೆಗಳು ಹಾಗೂ ಕೈಸಾಲ ಸೇರಿದಂತೆ ಬರೋಬ್ಬರಿ ಹತ್ತು ಲಕ್ಷಕ್ಕೂ ಹೆಚ್ಚು ಸಾಲ ಮಾಡಿದ್ದರು.
ಬ್ಯಾಂಕ್ ನೋಟಿಸ್ ಮತ್ತು ಒಡವೆ ಅಡಮಾನ:
ಸಾಲ ಮರುಪಾವತಿಸುವಂತೆ ಕಾವೇರಿ ಗ್ರಾಮೀಣ ಬ್ಯಾಂಕ್ನಿಂದ ಎರಡ್ಮೂರು ಬಾರಿ ನೋಟೀಸ್ ಬಂದಿತ್ತು. ಇದರಿಂದ ಆತಂಕಗೊಂಡ ಜಗದೀಶ್, ತಮ್ಮ ಪತ್ನಿಯ ಸ್ವಲ್ಪ ಒಡವೆಯನ್ನು ಬ್ಯಾಂಕ್ನಲ್ಲಿ ಅಡವಿಟ್ಟು ಸಾಲದ ಒಂದು ಭಾಗವನ್ನು ತೀರಿಸಿದ್ದರು. ಆದರೆ, ವರುಣನ ಮುನಿಸಿನಿಂದ ಮಳೆ ಬಾರದೆ ಹೊಲದಲ್ಲಿದ್ದ ಬೆಳೆಗಳು ಒಣಗಲಾರಂಭಿಸಿದವು.
ಬೆಳೆ ಉಳಿಸಿಕೊಳ್ಳುವ ಕೊನೆಯ ಪ್ರಯತ್ನವಾಗಿ, ಪತ್ನಿಯ ಹೆಸರಿನಲ್ಲಿದ್ದ ಉಳಿದ ಒಡವೆಗಳನ್ನೂ ಅಡವಿಟ್ಟು ಜಗದೀಶ್ ಮತ್ತೆ ಸಾಲ ಮಾಡಿದ್ದರು. ಆ ಹಣದಲ್ಲಿ ಜಮೀನಿನಲ್ಲಿ ಎರಡು ಬೋರ್ವೆಲ್ಗಳನ್ನು ಕೊರೆಸಿದ್ದರು. ಆದರೆ ದುರದೃಷ್ಟವಶಾತ್, ಎರಡೂ ಬಾವಿಗಳಲ್ಲಿ ನೀರು ಬಾರದೆ ಅವರ ಆಸೆಗೆ ತಣ್ಣೀರು ಎರಚಿದಂತಾಗಿತ್ತು.
ಹೊಲದಲ್ಲಿಯೇ ಕಳೆನಾಶಕ ಸೇವನೆ:
ಮಳೆಯೂ ಇಲ್ಲದೆ, ಬೋರ್ವೆಲ್ನಲ್ಲೂ ನೀರು ಸಿಗದೆ ಶುಂಠಿ, ಮೆಕ್ಕೆಜೋಳ ಹಾಗೂ ಆಲೂಗೆಡ್ಡೆ ಬೆಳೆಗಳು ಸಂಪೂರ್ಣವಾಗಿ ನಾಶವಾಗಿದ್ದವು. ಸಾಲ ತೀರಿಸುವ ದಾರಿ ಕಾಣದೆ ತೀವ್ರ ಹತಾಶೆಗೊಳಗಾದ ಜಗದೀಶ್, ಮನನೊಂದು ತಮ್ಮ ಹೊಲದಲ್ಲಿಯೇ ಕಳೆನಾಶಕ (ವಿಷ) ಸೇವಿಸಿದ್ದಾರೆ.
ವಿಷಯ ತಿಳಿದ ತಕ್ಷಣ ಕುಟುಂಬಸ್ಥರು ಅವರನ್ನು ಹಾಸನ ಜಿಲ್ಲಾಸ್ಪತ್ರೆಗೆ ದಾಖಲಿಸಿದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಜಗದೀಶ್ ಕೊನೆಯುಸಿರೆಳೆದಿದ್ದಾರೆ.
ಘಟನಾ ಸ್ಥಳಕ್ಕೆ ಗೊರೂರು ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.












