ಹಾಸನ (kannadapost.com): ರಾಜ್ಯ ಸರ್ಕಾರವು ಉದ್ದೇಶಪೂರ್ವಕವಾಗಿ ಸ್ಥಳೀಯ ಸಂಸ್ಥೆಗಳನ್ನು ದುರ್ಬಲಗೊಳಿಸುತ್ತಿದೆ. ಚುನಾವಣೆ ನಡೆಸದ ಕಾರಣ ಕೇಂದ್ರದಿಂದ ಬರಬೇಕಾದ ಸಾವಿರಾರು ಕೋಟಿ ರೂಪಾಯಿ ಅನುದಾನ ರಾಜ್ಯಕ್ಕೆ ಕೈತಪ್ಪುತ್ತಿದೆ ಎಂದು ಮಾಜಿ ಸಚಿವ ಎ. ಮಂಜು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಾಸನದಲ್ಲಿ ಇಂದು ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರದ ಆಡಳಿತ ವೈಖರಿ ಹಾಗೂ ಜಿಲ್ಲೆಗೆ ಆಗುತ್ತಿರುವ ಅನ್ಯಾಯದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಸ್ಥಳೀಯ ಸಂಸ್ಥೆ ಚುನಾವಣೆ ವಿಳಂಬ; ಕೋಟ್ಯಂತರ ರೂ. ಅನುದಾನ ನಷ್ಟ
15ನೇ ಹಣಕಾಸು ಯೋಜನೆಯ ಹಣ ಬಳಕೆಯಲ್ಲಿ ರಾಜ್ಯ ಸರ್ಕಾರದಿಂದ ಗಂಭೀರ ಲೋಪವಾಗಿದೆ. 2021-2026ರ ನಡುವಿನ 15ನೇ ಹಣಕಾಸು ಯೋಜನೆಯಡಿ ರಾಜ್ಯಕ್ಕೆ ಬರೋಬ್ಬರಿ 38,437 ಕೋಟಿ ರೂ. ಅನುದಾನ ಬರಬೇಕಿದೆ. ಆದರೆ, ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಹಾಗೂ ಗ್ರಾಮ ಪಂಚಾಯತ್ ಸೇರಿ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸದ ಕಾರಣ ಕೇಂದ್ರದ ಅನುದಾನವೇ ಬಂದಿಲ್ಲ ಎಂದು ಅವರು ದೂರಿದರು.
ಇದಲ್ಲದೆ, ಕೇಂದ್ರದ ಅನುದಾನವನ್ನು ಬಳಕೆ ಮಾಡಿಕೊಂಡಿರುವ 261 ಗ್ರಾಮ ಪಂಚಾಯಿತಿಗಳಲ್ಲಿ ಹಣ ದುರ್ಬಳಕೆಯಾಗಿರುವ ಬಗ್ಗೆ ಲೆಕ್ಕ ಪರಿಶೋಧನಾ (ಆಡಿಟ್) ವರದಿಯಲ್ಲೇ ಉಲ್ಲೇಖ ಮಾಡಲಾಗಿದೆ ಎಂಬ ಗಂಭೀರ ಆರೋಪವನ್ನು ಮಾಡಿದರು.
ಕೇಂದ್ರದತ್ತ ಬೊಟ್ಟು ಮಾಡುವ ಮುನ್ನ ಚುನಾವಣೆ ನಡೆಸಿ:
ಮುಂಬರುವ 16ನೇ ಹಣಕಾಸು ಯೋಜನೆಯಿಂದಲೂ ರಾಜ್ಯಕ್ಕೆ 43,791 ಕೋಟಿ ರೂ. ಹಣ ಬರಬೇಕಿದೆ. ಈ ಹಣವನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಬೇಕಿದ್ದರೆ, ತಕ್ಷಣವೇ ನಗರ ಹಾಗೂ ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಲೇಬೇಕಿದೆ. ಕೇಂದ್ರದಿಂದ ಅನುದಾನ ಬರುತ್ತಿಲ್ಲ ಎಂದು ರಾಜ್ಯ ಸರ್ಕಾರ ಸುಮ್ಮನೆ ಆರೋಪ ಮಾಡುತ್ತದೆ. ಆದರೆ, ಅನುದಾನ ಬರಬೇಕಾದರೆ ಮಾಡಬೇಕಾದ ಕನಿಷ್ಠ ಕೆಲಸವನ್ನೂ (ಚುನಾವಣೆ) ಮಾಡುತ್ತಿಲ್ಲ ಎಂದು ಅವರು ಕಿಡಿಕಾರಿದರು.
ರಾಜ್ಯದಲ್ಲಿ ನಗರ ಸ್ಥಳೀಯ ಸಂಸ್ಥೆಯ 7,631 ಸದಸ್ಯರು ಹಾಗೂ ಗ್ರಾಮೀಣ ಸ್ಥಳೀಯ ಸಂಸ್ಥೆಗಳ 98,601 ಸದಸ್ಯರ ಆಯ್ಕೆ ಪ್ರಕ್ರಿಯೆ ನಡೆಯಬೇಕಿದೆ. ಇಷ್ಟೊಂದು ದೊಡ್ಡ ಸಂಖ್ಯೆಯ ಜನಪ್ರತಿನಿಧಿಗಳ ಆಯ್ಕೆ ಆಗದಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ತಂದೊಡ್ಡಿರುವ ದೊಡ್ಡ ಆಘಾತವಾಗಿದೆ. ಚುನಾವಣೆ ವಿಳಂಬದಿಂದ ರಾಜ್ಯಕ್ಕೆ ಆಗಿರುವ ಆರ್ಥಿಕ ನಷ್ಟ ಮತ್ತು ಪರಿಣಾಮಗಳ ಬಗ್ಗೆ ಸರ್ಕಾರ ತಕ್ಷಣವೇ ‘ಶ್ವೇತ ಪತ್ರ’ ಹೊರಡಿಸಬೇಕು ಎಂದು ಎ.ಮಂಜು ಆಗ್ರಹಿಸಿದರು.
ಹಾಸನಕ್ಕೆ ಅನ್ಯಾಯ: ತುಮಕೂರಿಗೆ ನೀರು
ಜಿಲ್ಲೆಯ ನೀರಾವರಿ ವಿಚಾರದಲ್ಲೂ ಹಾಸನಕ್ಕೆ ದೊಡ್ಡ ಅನ್ಯಾಯವಾಗುತ್ತಿದೆ ಎಂದು ಎ.ಮಂಜು ಗುಡುಗಿದರು. “ಹಾಸನ ಜಿಲ್ಲೆಯ ಪಾಲಿನ ನೀರನ್ನು ಮೊಟಕುಗೊಳಿಸಿ ತುಮಕೂರು ಜಿಲ್ಲೆಗೆ ಹರಿಸಲಾಗುತ್ತಿದೆ. ನಿಯಮದ ಪ್ರಕಾರ ಮೊದಲು ಹೈಲೆವೆಲ್ ಕ್ಯಾನೆಲ್‌ಗೆ 15 ದಿನ ನೀರು ಹರಿಸಬೇಕು. ಆ ನಂತರವಷ್ಟೇ ಬೇರೆ ಕಡೆಗೆ ನೀರು ಬಿಡಬೇಕಿತ್ತು. ಆದರೆ, ಹಾಸನ ಜಿಲ್ಲೆಗೆ ಅನ್ಯಾಯ ಮಾಡಿ ತುಮಕೂರಿಗೆ ನೀರು ಹರಿಸಲಾಗುತ್ತಿದೆ,” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಈ ಎಲ್ಲಾ ಅನ್ಯಾಯಗಳು ಕಣ್ಣೆದುರೇ ನಡೆಯುತ್ತಿದ್ದರೂ, ನಮ್ಮ ಜಿಲ್ಲೆಯ ಉಸ್ತುವಾರಿ ಸಚಿವರು ಇದನ್ನು ತಡೆಯುವ ಅಥವಾ ಪ್ರಶ್ನಿಸುವ ಕೆಲಸವನ್ನು ಮಾಡಿಲ್ಲ ಎಂದು ಸಚಿವರ ಕಾರ್ಯವೈಖರಿ ವಿರುದ್ಧ ಅಸಮಾಧಾನ ಹೊರಹಾಕಿದರು.












