ಹಾಸನದಲ್ಲಿ ಕಾಂಗ್ರೆಸ್ ಪಕ್ಷವನ್ನು ಸೋಪು, ಫಿನಾಯಿಲ್ ಹಾಕಿ ತೊಳೆದ ಮಹಾನ್ ನಾಯಕ ಬಿ.ಶಿವರಾಮು: ಶಾಸಕ ಎಚ್.ಕೆ.ಸುರೇಶ್ ತೀವ್ರ ವಾಗ್ದಾಳಿ

ಬೇಲೂರು: (kannadapost.com):ತಮ್ಮನ್ನು ‘ಮಧ್ಯವರ್ತಿ’ ಹಾಗೂ ‘ರಿಯಲ್ ಎಸ್ಟೇಟ್ ಉದ್ಯಮಿ’ ಎಂದು ಟೀಕಿಸಿದ್ದ ಮಾಜಿ ಸಚಿವ ಬಿ. ಶಿವರಾಂ ವಿರುದ್ಧ ಬೇಲೂರು ಶಾಸಕ ಎಚ್.ಕೆ. ಸುರೇಶ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ನಾನು ಬ್ಯುಸಿನೆಸ್ ಮ್ಯಾನ್, ಕಂಟ್ರಾಕ್ಟರ್. ಅದರಲ್ಲಿ ದುಡಿದು ಜನರ ಸೇವೆ ಮಾಡಲು ಬಂದಿದ್ದೇನೆಯೇ ಹೊರತು, ಅವರಿವರಿಂದ ಕಿತ್ತುಕೊಂಡು ತಿನ್ನಲು ಬಂದಿಲ್ಲ” ಎಂದು ತಿರುಗೇಟು ನೀಡಿದ್ದಾರೆ.

ಕೆಳಗಿನ ಲಿಂಕ್ ಕ್ಲಿಕ್ ಮಾಡಿ ವಿಡಿಯೋ ವೀಕ್ಷಿಸಿ 👇

​ಬೇಲೂರು ಪಟ್ಟಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕ ಎಚ್.ಕೆ. ಸುರೇಶ್, ಮಾಜಿ ಸಚಿವರ ವಿರುದ್ಧ ಹತ್ತು ಹಲವು ಗಂಭೀರ ಆರೋಪಗಳನ್ನು ಮಾಡಿದರು.

ಶಾಸಕ ಎಚ್.ಕೆ. ಸುರೇಶ್ ಅವರ ವಾಗ್ದಾಳಿಯ ಪ್ರಮುಖ ಅಂಶಗಳು:

೧. ‘ಅರವತ್ತಕ್ಕೆ ಅರಳೋ ಮರಳೋ’ ಎಂದ ಶಾಸಕ

​”ಅರವತ್ತಕ್ಕೆ ಅರಳೋ, ಮರಳೋ ಅಂತಾರೆ. ಶಿವರಾಂ ಅವರ ಆರ್ಭಟ ನೋಡಿ ಎಷ್ಟೋ ಜನ ಹೋಗಿದ್ದಾರೆ. ನಾಲ್ಕು ಬಾರಿ ಎಂಎಲ್ಎ ಆಗಿದ್ದರಲ್ಲಾ, ಈ ಕ್ಷೇತ್ರಕ್ಕೆ ಅವರ ಕೊಡುಗೆ ಏನು? ಅವರ ಇತಿಹಾಸವನ್ನು ನಾನು ಬಿಚ್ಚಿಡುತ್ತೇನೆ” ಎಂದು ಸವಾಲು ಹಾಕಿದರು.

೨. ಕಾಂಗ್ರೆಸ್ ನಾಯಕರನ್ನು ಮುಗಿಸಿದ್ದು ಯಾರು?

​ಹಾಸನ ಜಿಲ್ಲೆಯ ಘಟಾನುಘಟಿ ನಾಯಕರ ರಾಜಕೀಯ ಅವನತಿಗೆ ಬಿ. ಶಿವರಾಂ ಅವರೇ ಕಾರಣ ಎಂದು ಶಾಸಕ ಸುರೇಶ್ ಆರೋಪಿಸಿದರು.

  • ​”ಕಾಂಗ್ರೆಸ್ ನಾಯಕರಾದ ಪುಟ್ಟಸ್ವಾಮಿಗೌಡರು, ಶ್ರೀಕಂಠಯ್ಯ, ಅನುಪಮಾ ಅವರ ಸ್ಥಿತಿ ಏನಾಯ್ತು?”
  • ​”ಕೆ.ಎಚ್. ಹನುಮೇಗೌಡರು, ಎ.ಟಿ. ರಾಮಸ್ವಾಮಿ, ಎ. ಮಂಜು ಅವರನ್ನು ಕಾಂಗ್ರೆಸ್ ಪಾರ್ಟಿಯಿಂದ‌ ಓಡಿಸಿದ್ದು ಯಾರು?”
  • ​”ಪಾಪ‌ ಸಚಿವ ಕೆ.ಎಂ. ಶಿವಲಿಂಗೇಗೌಡರು ತಮ್ಮ ಸ್ವಂತ ಶಕ್ತಿ ಹಾಗೂ ಅದೃಷ್ಟದಿಂದ ಉಳಿದುಕೊಂಡಿದ್ದಾರೆ. ಅವರನ್ನೂ ಸಹ ಮಾರುವ ಯತ್ನ ನಡೆದಿತ್ತು” ಎಂದು ಸ್ಫೋಟಕ ಹೇಳಿಕೆ ನೀಡಿದ್ದಾರೆ.

೩. ಸೋಪು, ಫಿನಾಯಿಲ್ ಹಾಕಿ ಕಾಂಗ್ರೆಸ್ ತೊಳೆದ ನಾಯಕ!

​ಹಾಸನ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಇಂದಿನ ಸ್ಥಿತಿಗೆ ಬಿ. ಶಿವರಾಂ ಅವರೇ ಕಾರಣ ಎಂದು ಆರೋಪಿಸಿದ ಅವರು, “ಕಾಂಗ್ರೆಸ್ ಪಕ್ಷವನ್ನು ಹಾಸನ ಜಿಲ್ಲೆಯಲ್ಲಿ ಸೋಪು ಹಾಗೂ ಪೆನಾಯಿಲ್ ಹಾಕಿ ಸಂಪೂರ್ಣವಾಗಿ ತೊಳೆದ ಮಹಾನ್‌ ನಾಯಕ ಯಾರು ಎಂದರೆ ಅದು ಬಿ. ಶಿವರಾಂ” ಎಂದು ತೀವ್ರವಾಗಿ ವ್ಯಂಗ್ಯವಾಡಿದರು.

೪. ಬಹಿರಂಗ ಚರ್ಚೆಗೆ ಸವಾಲು ಹಾಗೂ ಗಂಭೀರ ಆರೋಪ

​”೧೯೮೯ ರಿಂದ ಬಿ. ಶಿವರಾಂ ಅವರು ಏನೇನು ಮಾಡಿದ್ದಾರೆ ಎಂಬುದು ನನಗೆ ಗೊತ್ತಿದೆ. ಧೈರ್ಯವಿದ್ದರೆ ಅವರು ನನ್ನೊಂದಿಗೆ ಡಿಬೇಟ್ (ಬಹಿರಂಗ ಚರ್ಚೆ)ಗೆ ಬರಲಿ” ಎಂದು ಸವಾಲು ಎಸೆದಿದ್ದಾರೆ.

​”ಬೇಲೂರಿನ ಮುಗ್ಧ ಜನತೆಗೆ ಅವರ ರಾಜಕಾರಣದ ಇತಿಹಾಸ, ಚರಿತ್ರೆ ಗೊತ್ತಿಲ್ಲ. ಯಾವ ಊರಿನಲ್ಲಿ ಎಷ್ಟು ಮರ್ಡರ್ (ಕೊಲೆ) ಆಗಿವೆ? ಎಷ್ಟು ಜನ ಅಣ್ಣ-ತಮ್ಮಂದಿರನ್ನು ಎತ್ತಿಕಟ್ಟಿ ಹೊಡೆದಾಡಿಸಿದ್ದಾರೆ? ಯಾರ ಹೆಂಡತಿ, ಮಕ್ಕಳು ಇವರಿಂದ ಬೇಸತ್ತು ಓಡಿ ಹೋಗಿದ್ದಾರೆ ಎಂಬ ಸಂಪೂರ್ಣ ಮಾಹಿತಿಯನ್ನು ನಾನು ಮುಂದಿನ ದಿನಗಳಲ್ಲಿ ಕೊಡುತ್ತೇನೆ” ಎಂದು ಶಾಸಕ ಎಚ್.ಕೆ. ಸುರೇಶ್ ಎಚ್ಚರಿಕೆ ನೀಡಿದ್ದಾರೆ.