ಮಾಡಾಳು: ಸಡಗರ ಸಂಭ್ರಮದಿಂದ 167ನೇ ವರ್ಷದ ಶ್ರೀ ಸ್ವರ್ಣ ಗೌರಿ ಅಮ್ಮನವರ ಜಾತ್ರಾ ಮಹೋತ್ಸವಕ್ಕೆ ಚಾಲನೆ

ಮಾಡಾಳು(kannadapost.com: ನಾಡಿನ ಲಕ್ಷಾಂತರ ಭಕ್ತರ ಆರಾಧ್ಯ ದೇವತೆಯಾಗಿರುವ ಗ್ರಾಮದ ಮೂಲಸ್ಥಾನ ಶ್ರೀ ಸ್ವರ್ಣ ಗೌರಿ ಅಮ್ಮನವರ 167ನೇ ವರ್ಷದ ಜಾತ್ರಾ ಮಹೋತ್ಸವಕ್ಕೆ ಭಾನುವಾರ ವಿದ್ಯುಕ್ತವಾಗಿ ಚಾಲನೆ ನೀಡಲಾಯಿತು. ಹಾರನಹಳ್ಳಿ ಸುಕ್ಷೇತ್ರ ಕೋಡಿಮಠದ ಉತ್ತರಾಧಿಕಾರಿ ಶ್ರೀ ಚೇತನ್ ಮರಿ ದೇವರ ದಿವ್ಯ ಸಾನ್ನಿಧ್ಯದಲ್ಲಿ ಸಂಪ್ರದಾಯಬದ್ಧವಾಗಿ ಮೃತ್ತಿಕೆ (ಮಣ್ಣು) ತರುವ ಮೂಲಕ ಉತ್ಸವದ ಸಿದ್ಧತೆಗಳಿಗೆ ಚಾಲನೆ ದೊರೆಯಿತು.

ಮೃತ್ತಿಕೆ ಸಂಗ್ರಹ ಹಾಗೂ ಭವ್ಯ ಮೆರವಣಿಗೆ

​ಆಗಸ್ಟ್ ಮಾಸದ ನೂಲ ಹುಣ್ಣಿಮೆಯ ನಂತರ ಬರುವ ಶುಭದಿನದಂದು ಅಮ್ಮನವರ ಮೂರ್ತಿ ತಯಾರಿಕೆಗೆ ಚಾಲನೆ ನೀಡುವುದು ವಾಡಿಕೆ. ಅದರಂತೆ ಶ್ರೀಗಳ ಸಮ್ಮುಖದಲ್ಲಿ ಮೂಲ ಸನ್ನಿಧಿಯಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ನಂತರ ಶ್ರೀಗಳ ನೇತೃತ್ವದಲ್ಲಿ ನೂರಾರು ಭಕ್ತರು ಪಾದಯಾತ್ರೆಯ ಮೂಲಕ ಪಂಚಲಿಂಗೇಶ್ವರ ಸ್ವಾಮಿ ದೇವಾಲಯದ ಮುಂಭಾಗವಿರುವ ತೋಟಕ್ಕೆ ತೆರಳಿದರು. ಮೃತ್ತಿಕೆ ತರುವ ಸ್ಥಳದಲ್ಲಿ ಧಾರ್ಮಿಕ ಪದ್ಧತಿಯಂತೆ ಶ್ರೀಗಳ ಪಾದಪೂಜೆ ನೆರವೇರಿಸಿ, ಪವಿತ್ರ ಮೃತ್ತಿಕೆಯನ್ನು (ಮಣ್ಣು) ಸಂಗ್ರಹಿಸಲಾಯಿತು. ಬಳಿಕ ಮೃತ್ತಿಕೆಯನ್ನು ಪೂರ್ಣಕುಂಭ ಮೇಳದೊಂದಿಗೆ ವಾಪಸ್ ಮೂಲ ಸನ್ನಿಧಿಗೆ ಮೆರವಣಿಗೆಯ ಮೂಲಕ ತರಲಾಯಿತು.

ಇಲ್ಲಿ ಗಣಪನಿಗಿಂತ ಗೌರಿಯೇ ಪ್ರಧಾನ!

​ಕಾರ್ಯಕ್ರಮದಲ್ಲಿ ಭಕ್ತರನ್ನು ಉದ್ದೇಶಿಸಿ ಆಶೀರ್ವಚನ ನೀಡಿದ ಶ್ರೀ ಚೇತನ್ ಮುರುಘಾ ದೇವರು, “ನಾಡಿನೆಲ್ಲೆಡೆ ಗಣಪತಿಯನ್ನು ಹೊತ್ತು ಮೆರೆದರೆ, ಇಲ್ಲಿ ಗಣಪನ ಅಮ್ಮ ಗೌರಮ್ಮನಿಗೆ ಹೆಚ್ಚಿನ ಆದ್ಯತೆ. ಇಲ್ಲಿ ಗಣಪ ಗೌಣ, ದೇವಿಯೇ ಪ್ರಧಾನ,” ಎಂದು ಕ್ಷೇತ್ರದ ವಿಶೇಷತೆಯನ್ನು ಬಣ್ಣಿಸಿದರು.

​”167 ವರ್ಷಗಳ ಹಿಂದೆಯೇ ಕೋಡಿಮಠದ ಮಹಾ ತಪಸ್ವಿ ಶಿವಲಿಂಗಜ್ಜಯ್ಯ ಅವರು ಒಂದು ಕೋಟಿ ಜಪ ಮಾಡಿ, ಸ್ವರ್ಣ ಗೌರಿ ಅಮ್ಮನವರಿಗೆ ಮೂಗುತಿ ಧರಿಸಿ ಆಶೀರ್ವದಿಸಿದ್ದರು. ಅಂದಿನಿಂದ ಇಂದಿನವರೆಗೂ ಯಾವುದೇ ಜಾತಿ, ಮತ ಭೇದಭಾವವಿಲ್ಲದೆ ಎಲ್ಲರೂ ಒಂದಾಗಿ ಸಂಪ್ರದಾಯದಂತೆ ಜಾತ್ರಾ ಮಹೋತ್ಸವವನ್ನು ಆಚರಿಸಿಕೊಂಡು ಬರುತ್ತಿರುವುದು ಅತ್ಯಂತ ಸಂತೋಷದ ವಿಚಾರ,” ಎಂದು ಹರ್ಷ ವ್ಯಕ್ತಪಡಿಸಿದರು.

ನೂತನ ಶಿಲಾ ದೇವಾಲಯದಲ್ಲಿ ಮೂರ್ತಿ ಪ್ರತಿಷ್ಠಾಪನೆ

​ಶ್ರೀ ಸ್ವರ್ಣ ಗೌರಿ ಅಮ್ಮನವರ ನೂತನ ಮೂರ್ತಿಯನ್ನು ಖ್ಯಾತ ಶಿಲ್ಪಿ ಮಧು ಆಚಾರ್ ಅವರು ತಯಾರಿಸಲಿದ್ದಾರೆ. ಮುಂಬರುವ ಭಾದ್ರಪದ ಮಾಸದ ತದಿಗೆಯ ಶುಭದಿನದಂದು ಮೂಲಸ್ಥಾನ ಸ್ವರ್ಣ ಗೌರಮ್ಮ ದೇವಿ ದೇವಾಲಯದ ಆವರಣದಲ್ಲಿ ನಿರ್ಮಾಣವಾಗಿರುವ ನೂತನ ಶಿಲಾ ದೇವಾಲಯದಲ್ಲಿ, ಕೋಡಿಮಠದ ಜಗದ್ಗುರು ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮೀಜಿಯವರ ದಿವ್ಯ ಸಾನ್ನಿಧ್ಯದಲ್ಲಿ ಅಮ್ಮನವರ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗುವುದು ಎಂದು ಶ್ರೀಗಳು ಮಾಹಿತಿ ನೀಡಿದರು.

​ಈ ಮಂಗಳಕರ ಕಾರ್ಯಕ್ರಮದಲ್ಲಿ ಮಾಡಾಳು ಗ್ರಾಮಸ್ಥರು ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಅಪಾರ ಸಂಖ್ಯೆಯ ಭಕ್ತರು ಪಾಲ್ಗೊಂಡು ಅಮ್ಮನವರ ಕೃಪೆಗೆ ಪಾತ್ರರಾದರು.