ಹಾಸನ: ಯುವಕನ ಅತಿ ವೇಗದ ಚಾಲನೆಗೆ ಮಾಜಿ ಗ್ರಾ.ಪಂ. ಸದಸ್ಯ ಬಲಿ | Arsikere Accident

ಹಾಸನ (kannadapost.com):ಸ್ಕೂಟರ್ ಸವಾರನೊಬ್ಬನ ಅತಿ ವೇಗ ಹಾಗೂ ಅಜಾಗರೂಕತೆಯ ಚಾಲನೆಗೆ ಮಾಜಿ ಗ್ರಾಮ ಪಂಚಾಯಿತಿ ಸದಸ್ಯರೊಬ್ಬರು ಬಲಿಯಾಗಿರುವ ದಾರುಣ ಘಟನೆ  ಅರಸೀಕೆರೆಯಲ್ಲಿ ನಡೆದಿದೆ. ಮೃತರನ್ನು ಜಿ. ಶಂಕರನಹಳ್ಳಿ ತಾಂಡ್ಯದ ನಿವಾಸಿ ಗಂಗಾನಾಯ್ಕ (50) ಎಂದು ಗುರುತಿಸಲಾಗಿದೆ.

ಅಪಘಾತದ ವಿವರ:

ಗಂಗಾನಾಯ್ಕ ಅವರು ಅರಸೀಕೆರೆಯಿಂದ ತಮ್ಮ ಸ್ವಗ್ರಾಮ ಜಿ. ಶಂಕರನಹಳ್ಳಿ ತಾಂಡ್ಯಗೆ ತಮ್ಮ ಬೈಕ್‌ನಲ್ಲಿ (KA-13-W-1409) ತೆರಳುತ್ತಿದ್ದರು. ಈ ವೇಳೆ ಅರಸೀಕೆರೆ ಪಟ್ಟಣದ ಹುಳಿಯಾರು ರಸ್ತೆಯಲ್ಲಿ ಎದುರಿನಿಂದ ಮುಬಾರಕ್ ಎಂಬ ಯುವಕ ಡಿಯೋ ಸ್ಕೂಟರ್‌ನಲ್ಲಿ (KA-13-HD-6361) ಅತಿ ವೇಗವಾಗಿ ಬಂದು ಗಂಗಾನಾಯ್ಕ ಅವರ ಬೈಕ್‌ಗೆ ಮುಖಾಮುಖಿ ಡಿಕ್ಕಿ ಹೊಡೆದಿದ್ದಾನೆ.

​ಡಿಕ್ಕಿಯ ರಭಸಕ್ಕೆ ಕೆಳಗೆ ಬಿದ್ದ ಗಂಗಾನಾಯ್ಕ ಅವರು ಗಂಭೀರವಾಗಿ ಗಾಯಗೊಂಡಿದ್ದರು. ತಕ್ಷಣವೇ ಅವರನ್ನು ಚಿಕಿತ್ಸೆಗಾಗಿ ಹಾಸನ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ತೀವ್ರ ರಕ್ತಸ್ರಾವ ಹಾಗೂ ಗಾಯಗಳಾಗಿದ್ದ ಕಾರಣ ಚಿಕಿತ್ಸೆ ಫಲಕಾರಿಯಾಗದೆ ಅವರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಸಚಿವರ ಭೇಟಿ ಹಾಗೂ ಸಾಂತ್ವನ:

ವಿಷಯ ತಿಳಿದ ಕೂಡಲೇ ಅಬಕಾರಿ ಸಚಿವ ಕೆ.ಎಂ. ಶಿವಲಿಂಗೇಗೌಡ ಅವರು ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಮೃತದೇಹದ ಅಂತಿಮ‌ ದರ್ಶನ ಪಡೆದು, ಮೃತರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

​ಘಟನಾ ಸ್ಥಳಕ್ಕೆ ಅರಸೀಕೆರೆ ನಗರ ಠಾಣೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಅರಸೀಕೆರೆ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.