ಮೂಗಲಿ ಗ್ರಾಮದಲ್ಲಿ 20 ದಿನಗಳಿಂದ ಕುಡಿಯುವ ನೀರಿನ ಸಮಸ್ಯೆ: ಅಧಿಕಾರಿಗಳ ವಿರುದ್ಧ ಗ್ರಾಮಸ್ಥರಿಂದ ಪ್ರತಿಭಟನೆ

  • ಸಕಲೇಶಪುರ ತಾಲೂಕಿನ ಮೂಗಲಿ ಗ್ರಾಮದಲ್ಲಿ 15–20 ದಿನಗಳಿಂದ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ. ಅಧಿಕಾರಿಗಳ ನಿರ್ಲಕ್ಷ್ಯ ಖಂಡಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿ ಶಾಶ್ವತ ಪರಿಹಾರಕ್ಕೆ ಆಗ್ರಹಿಸಿದರು.

ಸಕಲೇಶಪುರ(kannadapost.com): ತಾಲೂಕಿನ ಬೆಳಗೋಡು ಹೋಬಳಿಯ ಮೂಗಲಿ ಗ್ರಾಮದಲ್ಲಿ ಕಳೆದ 15–20 ದಿನಗಳಿಂದ ತಲೆದೋರಿರುವ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯವನ್ನು ಖಂಡಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.

ಗ್ರಾಮದಲ್ಲಿ ಕಳೆದ ಎರಡು–ಮೂರು ವಾರಗಳಿಂದ ಸಮರ್ಪಕವಾಗಿ ಕುಡಿಯುವ ನೀರು ಪೂರೈಕೆಯಾಗುತ್ತಿಲ್ಲ. ಇದರಿಂದ ದೈನಂದಿನ ಕೆಲಸಗಳಿಗೂ ತೊಂದರೆಯಾಗಿದ್ದು, ಗ್ರಾಮಸ್ಥರು ಹನಿ ನೀರಿಗಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಈ ಕುರಿತು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಲಕ್ಷ್ಮೀ ನರಸಿಂಹ ಅವರಿಗೆ ಹಲವು ಬಾರಿ ಕರೆ ಮಾಡಿ ದೂರು ನೀಡಿದರೂ, ಅವರು ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಅಧಿಕಾರಿಗಳ ಸೂಚನೆಗೂ ಸ್ಪಂದಿಸದ ಪಿಡಿಒ?

ನೀರಿನ ಸಮಸ್ಯೆ ಬಗೆಹರಿಸುವಂತೆ ಸ್ಥಳೀಯ ಶಾಸಕರು ಹಾಗೂ ಮೇಲಧಿಕಾರಿಗಳು ಸೂಚನೆ ನೀಡಿದ್ದರೂ, ಪಿಡಿಒ ಲಕ್ಷ್ಮೀ ನರಸಿಂಹ ಅವರು ಅದನ್ನು ಲೆಕ್ಕಿಸದೆ ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

ಇದರ ಜೊತೆಗೆ, ನೀರು ಸರಬರಾಜು ಮಾಡಬೇಕಾದ ನೀರುಗಂಟಿಯೂ ಕರ್ತವ್ಯ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಗ್ರಾಮದ ಮಹಿಳೆಯರು ಅಸಮಾಧಾನ ವ್ಯಕ್ತಪಡಿಸಿದರು.

ಶಾಶ್ವತ ಪರಿಹಾರಕ್ಕೆ ಆಗ್ರಹ

ಕುಡಿಯುವ ನೀರಿನ ಸಮಸ್ಯೆಗೆ ತಾತ್ಕಾಲಿಕ ಪರಿಹಾರ ನೀಡುವುದರ ಬದಲಾಗಿ, ತಕ್ಷಣವೇ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸದೆ ಕರ್ತವ್ಯಲೋಪ ಎಸಗಿದ್ದಾರೆ ಎಂದು ಆರೋಪಿಸಿ, ಪಿಡಿಒ ವಿರುದ್ಧ ಮೇಲಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒಕ್ಕೊರಲಿನಿಂದ ಒತ್ತಾಯಿಸಿದರು.